ಅಮೆರಿಕದಿಂದ ಗಡಿಪಾರು: ಅಜ್ಜಿಯ ಭಯಾನಕ ಅನುಭವ ಹೇಗಿತ್ತು?

ನವದೆಹಲಿ: 

    ಕೆಲಸದ ಪರವಾನಗಿ, ಇತರ ಗುರುತಿನ ದಾಖಲೆಗಳಿತ್ತು. ಆದರೂ ಪಾಸ್‌ಪೋರ್ಟ್ ಇಲ್ಲ ಎನ್ನುವ ಕಾರಣಕ್ಕೆ ಅಮೆರಿಕದಿಂದ  ಕೈಕೋಳ, ಕಾಲುಗಳನ್ನು ಕಟ್ಟಿ ಗಡಿಪಾರು  ಮಾಡಲಾಯಿತು ಎಂಬುದಾಗಿ 71 ವರ್ಷದ ಪಂಜಾಬ್  ಹರ್ಜಿತ್ ಕೌರ್ ಹೇಳಿಕೊಂಡಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಈ ಸಮಯದಲ್ಲಿ ತಿನ್ನಲು ಸಾಧ್ಯವಾಗದ ಆಹಾರವನ್ನು ನೀಡಲಾಗಿತ್ತು. ನನ್ನ ಕುಟುಂಬ ಅಮೆರಿಕದಲ್ಲಿದೆ. ಅವರನ್ನು ನಾನು ಸೇರಬೇಕು. 30 ವರ್ಷಗಳಿಗೂ ಹೆಚ್ಚು ಕಾಲ ನಾನು ಅಮೆರಿಕದಲ್ಲಿದ್ದೆ. ಆದರೆ ಕಾರಣವನ್ನೂ ಕೂಡ ಹೇಳದೆ ನನ್ನನ್ನು ಗಡಿಪಾರು ಮಾಡಲಾಯಿತು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

  1991ರಿಂದ ಅಮೆರಿಕದಲ್ಲಿ ವಾಸಿಸುತ್ತಿರುವ ಕೌರ್, ಪಾಸ್‌ಪೋರ್ಟ್ ಇಲ್ಲದ ಕಾರಣಕ್ಕಾಗಿ 2012ರಲ್ಲಿ ಪ್ರಾರಂಭವಾದ ಅವರ ಗಡಿಪಾರು ಪ್ರಕ್ರಿಯೆ ಇತ್ತೀಚೆಗೆ ಪೂರ್ಣಗೊಂಡಿತ್ತು. 2012ರಿಂದ ನನ್ನ ಗಡೀಪಾರು ನಡೆಯುತ್ತಿರುವುದರಿಂದ ನಾನು ಸಹಿ ಹಾಕಲು ಹೋದಾಗ ಸೆಪ್ಟೆಂಬರ್ 8ರಂದು ಅವರು ನನ್ನನ್ನು ಬಂಧಿಸಿದರು. ಕೆಲಸದ ಪರವಾನಗಿ ಇತ್ತು, ನಾನು ತುಂಬಾ ತೆರಿಗೆ ಕೂಡ ಪಾವತಿಸಿದ್ದೆ. ಆದರೂ ನನ್ನನ್ನು ಗಡಿಪಾರು ಮಾಡಲಾಯಿತು ಎಂದು ಹೇಳಿದರು.

   ಪ್ರತಿ ಆರು ತಿಂಗಳಿಗೊಮ್ಮೆ ನಾನು ಹಾಜರಾತಿಗೆ ಹೋಗುತ್ತಿದ್ದೆ. ಸೆಪ್ಟೆಂಬರ್ 8ರಂದು ನನ್ನನ್ನು ಬಂಧಿಸಲಾಯಿತು. ನನಗೆ ಯಾವುದೇ ಕಾರಣವನ್ನು ಹೇಳಲಾಗಿಲ್ಲ. ಕುಟುಂಬವನ್ನು ಭೇಟಿ ಮಾಡಲು ಕೂಡ ಅವಕಾಶ ನೀಡಲಾಗಿಲ್ಲ. ಅವರು ನನ್ನನ್ನು ನೋಡಲು ಟಿಕೆಟ್‌ಗಳನ್ನು ಹೊಂದಿದ್ದರೂ ಕೂಡ ಬಿಡಲಿಲ್ಲ ಎಂದು ಅವರು ತಿಳಿಸಿದ್ದಾರೆ.

   ನನ್ನೊಂದಿಗೆ ಬಂಧನಕ್ಕೆ ಒಳಗಾದ ಹಲವಾರು ಮಹಿಳೆಯರು ಇದ್ದರು. ತಣ್ಣನೆಯ ಕೋಣೆಯಲ್ಲಿ ಬಂಧಿಸಿಡಲಾಗಿತ್ತು. ಸರಿಯಾದ ಕಂಬಳಿ ಕೂಡ ನೀಡಲಾಗಿಲ್ಲ. ಕೈಗಳಿಗೆ ಕೋಳ ಹಾಕಿ, ಪಾದಗಳನ್ನು ಕಟ್ಟಲಾಯಿತು. ಸಸ್ಯಾಹಾರಿಯಾಗಿರುವುದರಿಂದ ಅವರು ನನಗೆ ಸರಿಯಾದ ಆಹಾರವನ್ನೂ ಕೂಡ ನೀಡಲಿಲ್ಲ ಎಂದರು.

   ಭಾರತಕ್ಕೆ ಹಿಂದಿರುಗುವ ವಿಮಾನದಲ್ಲಿ ಕೈಕೋಳ ಹಾಕದಿದ್ದರೂ ನನಗೆ ಒದಗಿಸಲಾದ ಆಹಾರ ಸೂಕ್ತವಾಗಿರಲಿಲ್ಲ. ನನ್ನ ಮಕ್ಕಳು ಮತ್ತು ಮೊಮ್ಮಕ್ಕಳೆಲ್ಲರೂ ಅಮೆರಿಕದಲ್ಲಿದ್ದಾರೆ. ನಾನು ಅಲ್ಲಿಗೆ ಹೋಗಲು ಬಯಸುತ್ತೇನೆ. ಕಳೆದ ವರ್ಷ ತುಂಬಾ ಕಷ್ಟವಾಗಿತ್ತು. ಟ್ರಕ್ ಚಾಲಕರು ಸೇರಿದಂತೆ ಅನೇಕರು ಗಡಿಪಾರು ಆಗಿದ್ದಾರೆ. ಡೊನಾಲ್ಡ್‌ ಟ್ರಂಪ್ ಅಲ್ಲಿ ಅಧಿಕಾರಕ್ಕೆ ಬಂದ ಅನಂತರ ಇದೆಲ್ಲ ಆಗುತ್ತಿದೆ ಎಂದು ಹರ್ಜಿತ್ ಕೌರ್ ಹೇಳಿದರು.

   ಪತಿಯ ಮರಣದ ಬಳಿಕ ಇಬ್ಬರು ಗಂಡು ಮಕ್ಕಳೊಂದಿಗೆ ಅಮೆರಿಕದಲ್ಲಿ ವಾಸವಾಗಿದ್ದ ಕೌರ್, ಎರಡು ದಶಕಗಳಿಗೂ ಹೆಚ್ಚು ಕಾಲ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿದ್ದರು. ಆರೋಗ್ಯ ಸಮಸ್ಯೆಯ ಕಾರಣದಿಂದ ಬರ್ಕ್ಲಿಯ ಸೀರೆ ಅಂಗಡಿಯಲ್ಲಿ ಮಾಡುತ್ತಿದ್ದ ಕೆಲಸವನ್ನು ಇತ್ತೀಚೆಗೆ ಬಿಟ್ಟಿದ್ದರು.

   ಇಷ್ಟು ದಿನ ಅಲ್ಲಿ ವಾಸಿಸಿದ ಅನಂತರ ಇದ್ದಕ್ಕಿದ್ದಂತೆ ಬಂಧಿಸಿ ಈ ರೀತಿ ಗಡೀಪಾರು ಮಾಡಲಾಗಿದೆ. ಇದನ್ನು ಎದುರಿಸುವುದಕ್ಕಿಂತ ಸಾಯುವುದು ಉತ್ತಮ. ನನ್ನ ಪಾದಗಳನ್ನು ನೋಡಿ ಅವು ಹಸುವಿನ ಸಗಣಿ ಕೇಕ್‌ಗಳಂತೆ ಊದಿಕೊಂಡಿವೆ. ನನಗೆ ಔಷಧ ಸಿಕ್ಕಿಲ್ಲ ಅಥವಾ ನಡೆಯಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಅವರು ದೆಹಲಿ ತಲುಪಿದಾಗ ಹೇಳಿದ್ದರು. 

   ಇದಕ್ಕೂ ಮೊದಲು ಅವರ ಅಮೆರಿಕ ಮೂಲದ ಅವರ ವಕೀಲ ದೀಪಕ್ ಅಹ್ಲುವಾಲಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಮಾತನಾಡಿ, ಕೌರ್‌ಗೆ ಔಷಧ, ನೀರು ನಿರಾಕರಿಸಲಾಗಿತ್ತು. ಬಂಧನದ ಸಮಯದಲ್ಲಿ ಕಾವಲುಗಾರರು ಕೆಟ್ಟದಾಗಿ ನಡೆಸಿಕೊಂಡರು. ಈ ಬಗ್ಗೆ ದೂರು ದಾಖಲಿಸಲಾಗುವುದಾಗಿ ತಿಳಿಸಿದರು.

Recent Articles

spot_img

Related Stories

Share via
Copy link