ಕರೂರು :
ರ್ಯಾಲಿಯಲ್ಲಿ 41 ಜನರ ಸಾವಿಗೆ ಕಾರಣವಾದ ಕಾಲ್ತುಳಿತದ ನಂತರ, ಟಿವಿಕೆ ನಾಯಕ ವಿಜಯ್, ವೀಡಿಯೊ ಮೂಲಕ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟಿವಿಕೆ ನಾಯಕ ತಮ್ಮ ಪಕ್ಷದ ಸದಸ್ಯರಿಗೆ ಕಿರುಕುಳ ನೀಡಬೇಡಿ ಎಂದು ಸರ್ಕಾರಕ್ಕೆ ಹೇಳಿದರು. ಈ ಹಿಂದೆ ವಿಜಯ್ ಕಾಲ್ತುಳಿತದ ಕುರಿತು ಟ್ವೀಟ್ ಮಾಡಿ, ನನ್ನ ಹೃದಯ ಇಂದು ಒಡೆದು ಚೂರಾಗಿದೆ. ಕಳೆದುಕೊಂಡವರನ್ನು ಮರಳಿ ಕೊಡಿಸಲು ನಮಗೆ ಸಾಧ್ಯವಿಲ್ಲ. ಆದರೆ ಅವರ ಜೊತೆ ನಾವು ನಿಲ್ಲುತ್ತೇವೆ ಎಂದು ಹೇಳಿದ್ದರು. ಇದೀಗ ಸರ್ಕಾರಕ್ಕೆ ವಿಡಿಯೋ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳೇ, ನೀವು ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದರೆ, ನನ್ನ ಮೇಲೆ ಸೇಡು ತೀರಿಸಿಕೊಳ್ಳಿ. ನನ್ನ ಕಾರ್ಯಕರ್ತರನ್ನು ಅದರಿಂದ ಹೊರಗೆ ಬಿಡಿ” ಎಂದು ವಿಜಯ್ ಹೇಳಿದರು. ನನ್ನನ್ನು ವಿಚಾರಣೆಗೆಂದು ಬರುವವರು ನೇರವಾಗಿ ನನ್ನ ಮನೆ ಅಥವಾ ಕಚೇರಿಗೆ ಬರಬಹುದು ಎಂದು ಹೇಳಿದ್ದಾರೆ. ಕರೂರಿನಲ್ಲಿ ಟಿವಿಕೆ ಪಕ್ಷದ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ ಮೂರು ದಿನಗಳ ನಂತರ ಈ ವೀಡಿಯೊ ಬಂದಿದೆ.
ಆಗಬಾರದದ್ದು ನಡೆದುಹೋಗಿದೆ. ಕಾಲ್ತುಳಿತದ ಬಗ್ಗೆ ಸತ್ಯ ಶೀಘ್ರದಲ್ಲೇ ಹೊರಬರಲಿದೆ. ನನ್ನ ಜೀವನದಲ್ಲಿ ನಾನು ಇಂತಹ ‘ನೋವಿನ ಪರಿಸ್ಥಿತಿ’ಯನ್ನು ಎಂದಿಗೂ ಎದುರಿಸಿಲ್ಲ. ಮುಖ್ಯಮಂತ್ರಿ ಸರ್, ನೀವು ಸೇಡು ತೀರಿಸಿಕೊಳ್ಳಲು ಯೋಚಿಸಿದ್ದರೆ, ನೀವು ನನಗೆ ಏನು ಬೇಕಾದರೂ ಮಾಡಬಹುದು ಮತ್ತು ನನ್ನ ಪಕ್ಷದ ಜನರನ್ನು ಮುಟ್ಟಬಾರದು” ಎಂದು ಅವರು ಹೇಳಿದರು. ಇದಲ್ಲದೆ, ಹೆಚ್ಚುತ್ತಿರುವ ಉದ್ವಿಗ್ನತೆಗಳ ನಡುವೆಯೂ, ತಮ್ಮ ರಾಜಕೀಯ ಪ್ರಯಾಣವು “ಪೂರ್ಣ ದೃಢನಿಶ್ಚಯದೊಂದಿಗೆ” ಇನ್ನಷ್ಟು ಬಲವಾಗಿ ಮುಂದುವರಿಯುತ್ತದೆ ಎಂದು ವಿಜಯ್ ತಿಳಿಸಿದ್ದಾರೆ.
ಕರೂರ್ ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಿ. ಮಣಿವಣ್ಣನ್ ಅವರು ಸ್ವಯಂಪ್ರೇರಿತವಾಗಿ ಸಲ್ಲಿಸಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತದ ನಾಲ್ಕು ಸೆಕ್ಷನ್ಗಳ ಅಡಿಯಲ್ಲಿ ಮತ್ತು ತಮಿಳುನಾಡು ಸಾರ್ವಜನಿಕ ಆಸ್ತಿ (ಹಾನಿ ಮತ್ತು ನಷ್ಟ ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಥಿಯಾಜಗನ್ನ್ನು ಬಂಧಿಸಲಾಗಿದೆ. ಟಿವಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ‘ಬಸ್ಸಿ’ ಆನಂದ್, ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಸಿಟಿಆರ್ ನಿರ್ಮಲ್ ಕುಮಾರ್ ಮೇಲೆ ಪ್ರಕರಣ ದಾಖಲಾಗಿದೆ.








