ಕರಾಚಿ:
ಕ್ರಿಕೆಟ್ ವಿಚಾರದಲ್ಲಿಯೂ ಬೊಗಳೆ ಬಿಡುವ ಪಾಕಿಸ್ತಾನದ ಮತ್ತೊಂದು ಕರಾಳ ಮುಖ ಬಯಲಾಗಿದೆ. ಸ್ವತಃ ಪಾಕಿಸ್ತಾನ ಮಾಜಿ ಕ್ರಿಕೆಟಗನೇ ಈ ಸತ್ಯವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದಾರೆ. ಸಂರ್ಶನವೊಂದರಲ್ಲಿ ಮಾತನಾಡಿದ ಸಾಯೀದ್ ಅಜ್ಮಲ್, 2009 ರಲ್ಲಿ ಪಾಕ್ ತಂಡ ಟಿ20 ವಿಶ್ವಕಪ್ ಗೆದ್ದಾಗ ಪ್ರಧಾನಿಯಾಗಿದ್ದ ಯೂಸುಫ್ ರಾಜಾ ಗಿಲಾನಿ ಅವರು ಆಟಗಾರರಿಗೆ ತಲಾ 25 ಲಕ್ಷ ರೂ.ಗಳ ಚೆಕ್ ನೀಡಿದ್ದರು. ಆದರೆ, ಚೆಕ್ ನಗದು ಮಾಡಲು ಸಾಧ್ಯವಾಗಿರಲಿಲ್ಲ. ಈ ಚೆಕ್‌ಗಳು ಬೌನ್ಸ್ ಆಗಿದ್ದವು ಎಂದಿದ್ದಾರೆ.
“2009 ರಲ್ಲಿ ಟಿ20 ವಿಶ್ವಕಪ್ ಗೆದ್ದು, ತವರಿಗೆ ಬಂದಾಗ ನಮಗೆ ಅಷ್ಟೊಂದು ಹಣ ಸಿಗಲಿಲ್ಲ. ಆಗಿನ ಪ್ರಧಾನಿ ನಮ್ಮನ್ನು ಆಹ್ವಾನಿಸಿ ಪ್ರತಿ ಆಟಗಾರನಿಗೆ 25 ಲಕ್ಷ ರೂ.ಗಳ ಚೆಕ್ ನೀಡಿದರು. ಆಗ ಅದು ಬಹಳಷ್ಟು ಹಣ ಎಂದು ನಾವು ಸಂತೋಷಪಟ್ಟೆವು. ಆದರೆ, ಚೆಕ್ ಬೌನ್ಸ್ ಆಗಿತ್ತು. ಅಂದು ಈ ವಿಚಾರವನ್ನು ಯಾರ ಮುಂದೆ ಹೇಳಲು ಆಗಿರಲಿಲ್ಲ. ಒಂದೊಮ್ಮೆ ಈ ಬಗ್ಗೆ ಯಾರೇ ಧ್ವನಿ ಎತ್ತಿದ್ದರೂ ಅವರ ಕ್ರಿಕೆಟ್ ವೃತ್ತಿ ಜೀವನ ಅಂತ್ಯಗೊಳ್ಳುತ್ತಿತ್ತು. ಹೀಗಾಗಿ ಯಾರು ಕೂಡ ಇದನ್ನು ಪ್ರಶ್ನಿಸಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಮಾತ್ರವೇ ಹಣವನ್ನು ಪಡೆದಿದ್ದು ಎಂದು ಅಜ್ಮಲ್ ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ (ಪಿಸಿಬಿ) ಸುಮಾರು 180 ಕೋಟಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು. ಪಾಕಿಸ್ತಾನದ ಪ್ರಧಾನ ಲೆಕ್ಕಪರಿಶೋಧಕರು ಸಿದ್ಧಪಡಿಸಿರುವ 2023–24ನೇ ಹಣಕಾಸು ವರ್ಷದ ವರದಿಯಲ್ಲಿ ಈ ವಿಚಾರ ಬಯಲಾಗಿದೆ. ಪಿಸಿಬಿಯು ಕಾರ್ಯಕ್ರಮಗಳ ಪ್ರಾಯೋಜಕರಿಂದ 18.6 ಮಿಲಿಯನ್ ಡಾಲರ್ (₹150 ಕೋಟಿ) ಮೌಲ್ಯದ ಶುಲ್ಕ ಸಂಗ್ರಹಿಸುವಲ್ಲಿ ವಿಫಲವಾಗಿದೆ ಎಂದು ವರದಿಯಾಗಿತ್ತು.
ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್ 2024ರ ಜಾವೆಲಿನ್ ಥ್ರೋ ವಿಭಾಗದಲ್ಲಿ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದಿದ್ದ ಪಾಕಿಸ್ತಾನದ ಅರ್ಶದ್ ನದೀಂಗೆ ಕೂಡ ಪಾಕಿಸ್ತಾನದ ಮಂತ್ರಿಗಳು ಮತ್ತು ಗಣ್ಯರು ಘೋಷಿಸಿದ್ದ ಬಹುಮಾನ ಇನ್ನೂ ಕೈ ಸೇರಿಲ್ಲ ಎಂದು ಆರೋಪಿಸಿದ್ದರು.
ಒಲಿಂಪಿಕ್ ಚಿನ್ನದ ಪದಕ ಗೆದ್ದ ಬಳಿಕ ಹಲವು ಭರವಸೆಗಳನ್ನು ನೀಡಲಾಗಿತ್ತು. ನಗದು ಬಹುಮಾನ ಹೊರತುಪಡಿಸಿ ಜಮೀನು ನೀಡುವ ಎಲ್ಲಾ ಭರವಸೆ ಸುಳ್ಳಾಗಿದೆ. ಅದು ನನಗೆ ಈವರೆಗೂ ಸಿಕ್ಕಿಲ್ಲ ಎಂದಿದ್ದರು.








