ಕ್ಯಾನ್‌ಬೆರಾ:
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಬಹುನಿರೀಕ್ಷಿತ ಆಷಸ್ ಟೆಸ್ಟ್ ಸರಣಿ ನವೆಂಬರ್ 21 ರಂದು ಆರಂಭವಾಗಲಿದೆ. ಒಟ್ಟು 5 ಪಂದ್ಯಗಳ ಈ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ನಾಯಕ ಪ್ಯಾಟ್ ಕಮಿನ್ಸ್ ಅಲಭ್ಯರಾಗಿದ್ದಾರೆ ಆದರೆ, ಇದೀಗ ಅವರು ಟೆಸ್ಟ್ ಸರಣಿಯಿಂದಲೇ ಹೊರ ಬೀಳಲಿದ್ದಾರೆಂದು ವರದಿಯಾಗಿದೆ. ಕಳೆದ ವಾರ ನಡೆದಿದ್ದ ಸ್ಕ್ಯಾನಿಂಗ್ ಪರೀಕ್ಷೆಯಲ್ಲಿ ಬೆನ್ನಿಗೆ ಸ್ಟ್ರೆಸ್ ಇಂಜುರಿಗೆ ಒಳಗಾಗಿರುವುದು ಕಂಡು ಬಂದಿದೆ. ಹಾಗಾಗಿ ಸಂಪೂರ್ಣವಾಗಿ ಗುಣಮುಖರಾಗಲು ಅವರಿಗೆ ಇನ್ನಷ್ಟು ದಿನಗಳು ಅಗತ್ಯವಿದೆ. ಹಾಗಾಗಿ ಆಷಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವನ್ ಸ್ಮಿತ್ ಮುನ್ನಡೆಸುವ ಸಾಧ್ಯತೆ ಇದೆ.
ಬೆನ್ನು ನೋವಿಗೆ ತುತ್ತಾಗಿರುವ ಕಮಿನ್ಸ್ ಅವರು ಅಲ್ಪ ಚೇತರಿಕೆ ಕಂಡಿದ್ದಾರೆ. ಆದರೆ ಸಂಪೂರ್ಣವಾಗಿ ನೋವು ನಿವಾರಣೆಯಾಗಿಲ್ಲ. ಅತ್ಯಂತ ಬಿಡುವಿಲ್ಲದ ಆಷಸ್ ವೇಳಾಪಟ್ಟಿಯಲ್ಲಿ ತಂಡದ ಪರ ಯಶಸ್ವಿ ಕಾರ್ಯ ನಿರ್ವಹಣೆ ಮಾಡಲು ಅಸಾಧ್ಯ ಎನ್ನಲಾಗಿದೆ. ಈ ಕಾರಣದಿಂದಾಗಿ ಕಮಿನ್ಸ್, ಅವರಿಗೆ ಮತ್ತಷ್ಟು ದಿನಗಳ ಕಾಲ ವಿಶ್ರಾಂತಿ ಅಗತ್ಯವಿದೆ. ಈ ಕುರಿತು ಈವರೆಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಮಂಡಳಿಯ ಈ ನಡೆ ಆಸೀಸ್ ವೇಗಿ ಅಲಭ್ಯತೆ ಬಹುತೇಕ ಸ್ಪಷ್ಟ ಎನ್ನುವುದನ್ನು ಸೂಚಿಸುತ್ತಿದೆ. ವೇಗಿ ಸರಣಿಯ ಕೊನೆ ಪಂದ್ಯಗಳಿಗೆ ಮರಳಬಹುದು ಆದರೆ ಈ ಬಗ್ಗೆ ಯಾವುದೇ ಸುಳಿವಿಲ್ಲ.
