ಬೆಂಗಳೂರು:
ರಾಮನಗರದ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಶೂಟಿಂಗ್‌ಗೆ ಮತ್ತೆ ಅವಕಾಶ ನೀಡಲಾಗಿದ್ದು, ಬಿಗ್ ಬಾಸ್ ಮನೆಗೆ ಎಲ್ಲಾ 17 ಸ್ಪರ್ಧಿಗಳು ಶಿಫ್ಟ್ ಆಗಿದ್ದಾರೆ. ನಸುಕಿನ ಜಾವ 2:45ಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಎಸ್‌ಪಿ ಶ್ರೀನಿವಾಸ್ ಗೌಡ, ತಹಶಿಲ್ದಾರ್ ತೇಜಸ್ವಿನಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಜಾಲಿವುಡ್ ಸ್ಟುಡಿಯೋದ ಗೇಟ್ ಸೀಲ್ ಓಪನ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿ, ಬಿಗ್ ಬಾಸ್‌ನ ಹೊಸ ಪ್ರೋಮೋ ರಿಲೀಸ್ ಮಾಡಿದೆ.
ಜಾಲಿವುಡ್ ಸ್ಟುಡಿಯೋಸ್‌ನ ಗೇಟ್ ಸಿ ಮಾತ್ರ ಓಪನ್‌ಗೆ ಅವಕಾಶ ನೀಡಲಾಗಿದ್ದು, ಬಿಗ್ ಬಾಸ್ ಮನೆಗೆ ಸಂಪರ್ಕ ಕಲ್ಪಿಸುವ ಜಾಲಿವುಡ್‌ನ ಗೇಟ್ ಸಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಸಮ್ಮುಖದಲ್ಲಿ ಓಪನ್ ಮಾಡಲಾಗಿದೆ. ಸ್ಟುಡಿಯೋ ಸದ್ಯ ಸಾರ್ವಜನಿಕರಿಗೆ ಮುಕ್ತವಾಗುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈಗಲ್‌ಟನ್ ರೆಸಾರ್ಟ್‌ನಿಂದ ಮುಂಜಾನೆ 4 ಗಂಟೆ ಸುಮಾರಿಗೆ ಎಲ್ಲಾ ಸ್ಪರ್ಧಿಗಳನ್ನು ಕಾರಿನ ಗಾಜಿಗೆ ಕಪ್ಪು ಬಟ್ಟೆ ಸುತ್ತಿ ಸಿಬ್ಬಂದಿಗಳು ಬಿಗ್ ಬಾಸ್ ಮನೆಗೆ ಕರೆತಂದಿದ್ದಾರೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಯಶವಂತ್ ವಿ ಗುರುಕರ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ತೆರೆದಿದ್ದೇವೆ. ಜಾಲಿವುಡ್ ಸಂಪೂರ್ಣ ಕಾರ್ಯಾಚರಣೆ ನಡೆಸಲು ಅವಕಾಶ ನೀಡಿಲ್ಲ. ಕೇವಲ ಬಿಗ್ ಬಾಸ್ ಶೋ ಸ್ಪರ್ಧಿಗಳು, ಸಿಬ್ಬಂದಿ ಓಡಾಟ ಹಾಗೂ ಅಗತ್ಯ ವಸ್ತುಗಳ ಬಳಕೆಗೆ ಅವಕಾಶ ಕೊಡಲಾಗಿದೆ. ಬಿಗ್ ಬಾಸ್ ಶೂಟಿಂಗ್ ಆರಂಭದ ಬಗ್ಗೆ ನಾಳೆ ತೀರ್ಮಾನ ಆಗಲಿದೆ ಎಂದು ತಿಳಿಸಿದರು.
ಬಿಗ್ ಬಾಸ್ ಮನೆಗೆ ಮತ್ತೆ ಅವಕಾಶ ನೀಡಿರುವುದಕ್ಕೆ ನಟ ಕಿಚ್ಚ ಸುದೀಪ್ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಟ ಸುದೀಪ್, ಸಮಯೋಚಿತ ಬೆಂಬಲಕ್ಕಾಗಿ ನಾನು ಗೌರವಾನ್ವಿತ ಡಿ.ಕೆ.ಶಿವಕುಮಾರ್ ಸರ್ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಇತ್ತೀಚಿನ ಅವ್ಯವಸ್ಥೆ ಅಥವಾ ಗೊಂದಲಗಳಲ್ಲಿ ಬಿಗ್ ಬಾಸ್ ನಲ್ಲಿ ಭಾಗಿಯಾಗಿಲ್ಲ ಅಥವಾ ಭಾಗವಾಗಿರಲಿಲ್ಲ ಎಂದು ಒಪ್ಪಿಕೊಂಡಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ DCM ಅವರಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಮತ್ತು #Nalpad ಅವರ ಸಮರ್ಪಿತ ಪ್ರಯತ್ನಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
