ವಾಷಿಂಗ್ಟನ್:
ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯ ನೆಪದಲ್ಲಿ ದೇಶದಲ್ಲಿರುವ ಹಲವಾರು ವಿದೇಶಿ ವಲಸೆಗಾರರಿಗೆ ಅನ್ವಯವಾಗುವಂತೆ ಕಠಿಣ ನಿಯಮಗಳನ್ನು ಜಾರಿಗೆಗೊಳಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಹೆಚ್-1ಬಿ ವೀಸಾ ನಿಯಮವನ್ನು ಪರಿಷ್ಕರಣೆ ನಡೆಸಿದೆ. ಈ ಮೂಲಕ ಯುಎಸ್ ಸರ್ಕಾರವು (US government) ಹೆಚ್-1ಬಿ ವೀಸಾಗಳ ಮೇಲಿನ ವಾರ್ಷಿಕ ಮಿತಿಯನ್ನು 65,000 ಹಾಗೂ ಯುಎಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಅಥವಾ ಹೆಚ್ಚಿನ ಪದವಿ ಪಡೆದಿರುವವರಿಗೆ 20,000 ವಿನಾಯಿತಿ ಮಿತಿಯನ್ನು ನಿಗದಿಪಡಿಸಿದೆ.
ಹೆಚ್-1ಬಿ ವೀಸಾ ನಿಯಮ ಪರಿಷ್ಕರಣೆಗೆ ಮುಂದಾಗಿಯುವ ಟ್ರಂಪ್, ಇದಕ್ಕಾಗಿ 100,000 ಡಾಲರ್ ಕಡ್ಡಾಯ ಶುಲ್ಕವನ್ನು ವಿಧಿಸಿದ್ದರು. ಇದಾದ ಬಳಿಕ ಉದ್ಯೋಗದಾತ ಪರವಾನಿಗೆ ಮತ್ತು ಅರ್ಹತೆಗೆ ಸಂಬಂಧಿಸಿ ಹೆಚ್ಚುವರಿ ವಲಸೆ ನಿರ್ಬಂಧಗಳನ್ನು ವಿಧಿಸಲು ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಹೆಚ್-1ಬಿ ವೀಸಾ ನಿಯಮ ಬದಲಾವಣೆಗೆ ಪ್ರಸ್ತಾಪ ಮಾಡಿದ್ದು, ಇದು ಕ್ಯಾಪ್ ವಿನಾಯಿತಿಗಳಿಗೆ ಅರ್ಹತೆಯನ್ನು ಪರಿಷ್ಕರಿಸುವುದು, ಕಾರ್ಯಕ್ರಮದ ಅವಶ್ಯಕತೆಗಳನ್ನು ಉಲ್ಲಂಘಿಸಿದ ಉದ್ಯೋಗದಾತರಿಗೆ ಹೆಚ್ಚಿನ ಪರಿಶೀಲನೆಯನ್ನು ಒದಗಿಸುವುದು ಮತ್ತು ಮೂರನೇ ವ್ಯಕ್ತಿಯ ನಿಯೋಜನೆಗಳ ಮೇಲೆ ಮೇಲ್ವಿಚಾರಣೆಯನ್ನು ಹೆಚ್ಚಿಸುವುದು ಮೊದಲಾದ ಹಲವಾರು ವಿಷಯಗಳನ್ನು ಒಳಗೊಂಡಿದೆ.
ಇನ್ನು ಉದ್ಯೋಗದಾತರು ಮತ್ತು ಹುದ್ದೆಗಳಿಗೆ ಅನುಸಾರವಾಗಿ ವಾರ್ಷಿಕ ಮಿತಿಯನ್ನು ನೀಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಟ್ರಂಪ್ ಆಡಳಿತ ವಿನಾಯಿತಿ ಮಿತಿಯಲ್ಲಿ ಬದಲಾವಣೆ ಏನಾದರೂ ಮಾಡಿದರೆ ಇದು ಲಾಭರಹಿತ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಪ್ರಸ್ತುತ ವಿನಾಯಿತಿಗಳಿಂದ ಪ್ರಯೋಜನ ಪಡೆಯುವ ಆರೋಗ್ಯ ಸಂಸ್ಥೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ನಿರ್ಧರಿಸಿರುವ ಹೆಚ್-1ಬಿ ವೀಸಾದಲ್ಲಿನ ನಿಯಮ ಬದಲಾವಣೆಯು ವಲಸೆರಹಿತ ಕಾರ್ಯಕ್ರಮದ ಸಮಗ್ರತೆಯನ್ನು ಸುಧಾರಿಸುವ ಹಾಗೂ ಯುಎಸ್ ಕಾರ್ಮಿಕರ ವೇತನ ಮತ್ತು ಕೆಲಸವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಆದರೆ ಇದು ಯುಎಸ್ ನಲ್ಲಿ ಕೆಲಸ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳು, ಯುವ ವೃತ್ತಿಪರರು ಸೇರಿದಂತೆ ಲಕ್ಷಾಂತರ ವಲಸಿಗರ ಮೇಲೆ ಪರಿಣಾಮ ಬೀರಲಿದೆ. ಹೆಚ್-1ಬಿ ವೀಸಾದಲ್ಲಿನ ನಿಯಮ ಬದಲಾವಣೆಯು ಈ ವರ್ಷದ ಕೊನೆಯ ತಿಂಗಳಲ್ಲಿ ಜಾರಿಯಾಗುವ ಸಾಧ್ಯತೆ ಇದೆ.
ತಾತ್ಕಾಲಿಕ ವೀಸಾವಾಗಿರುವ ಹೆಚ್-1ಬಿ ವೀಸಾವು ಅಮೆರಿಕ ಪ್ರವೇಶಕ್ಕೆ ಭಾರತೀಯರು ಸೇರಿದಂತೆ ಹೆಚ್ಚಿನ ಕೌಶಲ ಹೊಂದಿರುವ ವಿದೇಶಿ ಪ್ರಜೆಗಳಿಗೆ ಮುಖ್ಯವಾಗಿದೆ. ಇದನ್ನು ಪಡೆದವರು ಮಾತ್ರ ಶಾಶ್ವತ ನಿವಾಸವನ್ನು (ಗ್ರೀನ್ ಕಾರ್ಡ್) ಪಡೆಯುವ ಮೊದಲು ಅಮೆರಿಕದಲ್ಲಿ ದೀರ್ಘಕಾಲ ವಾಸ ಮಾಡಬಹುದು.
1990ರ ವಲಸೆ ಕಾಯ್ದೆಯಡಿ ಮಾಡಲ್ಪಟ್ಟಿರುವ ಹೆಚ್-1ಬಿ ವೀಸಾ ತಾಂತ್ರಿಕ ಕೌಶಲ ಹೊಂದಿರುವ ಹೊರದೇಶದ ಜನರನ್ನು ದೇಶಕ್ಕೆ ಕರೆತರುವ ಉದ್ದೇಶವನ್ನು ಹೊಂದಿದೆ. ಈ ವೀಸಾ ಪಡೆದವರು ಇಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಯುಎಸ್ ಸರ್ಕಾರವು ಹೆಚ್-1ಬಿ ವೀಸಾಗಳಲ್ಲಿ ವಾರ್ಷಿಕ ಮಿತಿಯನ್ನು 65,000ಕ್ಕೆ ನಿಗದಿಪಡಿಸಿದೆ. ಯುಎಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಅಥವಾ ಹೆಚ್ಚಿನ ಪದವಿ ಹೊಂದಿರುವ ವ್ಯಕ್ತಿಗಳಿಗೆ 20,000 ವಿನಾಯಿತಿ ಇದೆ. ಆ ವೀಸಾಗಳನ್ನು ಲಾಟರಿ ಮೂಲಕ ನೀಡಲಾಗುತ್ತದೆ.
ವರದಿಯೊಂದರ ಪ್ರಕಾರ 2023ರಲ್ಲಿ ಹೆಚ್-1ಬಿ ವೀಸಾ ಅರ್ಜಿ ಅನುಮೋದನೆಯಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಜನರು ಭಾರತದಿಂದ ಬಂದಿದ್ದಾರೆ ಎನ್ನಲಾಗಿದೆ. 2012 ರಿಂದ ಅನುಮೋದಿಸಲಾದ ಹೆಚ್-1ಬಿ ವೀಸಾ ಅರ್ಜಿಗಳಲ್ಲಿ ಶೇ. 60 ರಷ್ಟು ಮಂದಿ ಕಂಪ್ಯೂಟರ್ ಸಂಬಂಧಿತ ಉದ್ಯೋಗಗಳಿಗಾಗಿ ಅಮೆರಿಕಕ್ಕೆ ವಲಸೆ ಬಂದಿದ್ದಾರೆ. ಹೆಚ್-1ಬಿ ವೀಸಾ ಪಡೆದು ಅಮೆರಿಕದಲ್ಲಿ ಉದ್ಯೋಗ ಪಡೆದವರು ಅಮೆರಿಕನ್ ಉದ್ಯೋಗಿಗಳಿಗಿಂತ ಸಮಾನ ಅಥವಾ ಅದಕ್ಕಿಂತ ಹೆಚ್ಚಿನ ವೇತನವನ್ನು ಪಡೆಯುತ್ತಾರೆ ಎನ್ನಲಾಗಿದೆ.
