ವಾಷಿಂಗ್ಟನ್:
ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆಲ್ಲದಿರುವ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಶಸ್ತಿ ಪುರಸ್ಕೃತ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೊ ಅವರಿಗೆ ಹಲವು ಬಾರಿ ತಾನು ಸಹಾಯ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಮರಿಯಾ ಕೊರಿನಾ ಮಚಾಡೊ, ಗೌರವಾರ್ಥಕ್ಕಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ನನ್ನ ಜೊತೆ ಮಾತನಾಡಿದ ಅವರು, ನೀವು ನಿಜವಾಗಿಯೂ ಇದಕ್ಕೆ ಅರ್ಹರು ಆದ್ದರಿಂದ ನಾನು ಇದನ್ನು ನಿಮ್ಮ ಗೌರವಾರ್ಥವಾಗಿ ಸ್ವೀಕರಿಸುತ್ತಿದ್ದೇನೆ’ ಎಂದು ಹೇಳಿದರು. ಆದರೆ ನನಗೇ ನೊಬೆಲ್ ಕೊಡಿ ಎಂದು ನಾನೆಂದೂ ಹೇಳಿರಲಿಲ್ಲ ಎಂದು ಟ್ರಂಪ್ ಉಲ್ಟಾ ಹೊಡೆದಿದ್ದಾರೆ.
ವಿಪತ್ತಿನ ಸಮಯದಲ್ಲಿ ವೆನೆಜುವೆಲಾದಲ್ಲಿ ಅವರಿಗೆ ಬಹಳಷ್ಟು ಸಹಾಯದ ಅಗತ್ಯವಿತ್ತು. ನಾನು ಲಕ್ಷಾಂತರ ಜೀವಗಳನ್ನು ಉಳಿಸಿದ್ದರಿಂದ ನನಗೆ ಸಂತೋಷವಾಗಿದೆ. ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸಿದ್ದಕ್ಕಾಗಿ ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸಲು ಅವರ ಹೋರಾಟಕ್ಕಾಗಿ ಮಚಾದೊ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು.
ಗುರುವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು ಎಂದು ಹೇಳಿದ್ದರು. ಮರಿಯಾ ಕೊರಿನಾ ಮಚಾಡೊ 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ನಂತರ ಶ್ವೇತ ಭವನ ಖಾರವಾಗಿ ಪ್ರತಿಕ್ರಿಯೆ ನೀಡಿತ್ತು. ನೊಬೆಲ್ ಸಮಿತಿಯು ಶಾಂತಿಯ ಮೇಲೆ ರಾಜಕೀಯವನ್ನು ಇರಿಸುತ್ತದೆ ಎಂದು ಸಾಬೀತುಪಡಿಸಿದೆ” ಎಂದು ಶ್ವೇತಭವನದ ವಕ್ತಾರ ಸ್ಟೀವನ್ ಚೆಯುಂಗ್ ಶುಕ್ರವಾರ ಸಂಜೆ ಹೇಳಿದ್ದರು. ಅಧ್ಯಕ್ಷ ಟ್ರಂಪ್ ಶಾಂತಿ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು, ಯುದ್ಧಗಳನ್ನು ಕೊನೆಗೊಳಿಸುವುದನ್ನು ಮತ್ತು ಜೀವಗಳನ್ನು ಉಳಿಸುವುದನ್ನು ಮುಂದುವರಿಸುತ್ತಾರೆ. ಅವರು ಮಾನವೀಯ ಹೃದಯವನ್ನು ಹೊಂದಿದ್ದಾರೆ ಎಂದು ಹೇಳಿದ್ದರು.
ಟ್ರಂಪ್ ಸಹ ಪ್ರಶಸ್ತಿಯ ಪ್ರಬಲ ಆಕಾಂಕ್ಷಿಯಾಗಿದ್ದರು. ಕೆಲವು ತಿಂಗಳಿಂದ ಟ್ರಂಪ್ ತಮ್ಮನ್ನು ಜಾಗತಿಕ ಶಾಂತಿಪ್ರಿಯ ಎಂದು ಸಕ್ರಿಯವಾಗಿ ಪ್ರಚಾರ ಮಾಡಿಕೊಂಡಿದ್ದರು, ಅವರ 20 ಅಂಶಗಳ ಗಾಜಾ ಶಾಂತಿ ಯೋಜನೆಯನ್ನು ಎತ್ತಿ ತೋರಿಸಿದ್ದರು, ಹಲವಾರು ಯುದ್ಧಗಳನ್ನು ಕೊನೆಗೊಳಿಸಿದ ಕೀರ್ತಿಯನ್ನು ತಮಗೆ ತಾವೇ ಕೊಟ್ಟುಕೊಂಡಿದ್ದರು.








