ಪಾರ್ಟಿಗೆ ಹೋದವ ಸೇರಿದ್ದು ಮಸಣಕ್ಕೆ!

ಭೋಪಾಲ್‌:

    22 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ   ಪೊಲೀಸ್ ಸಿಬ್ಬಂದಿಯ ಥಳಿತದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಶುಕ್ರವಾರ ಮುಂಜಾನೆ ಭೋಪಾಲ್‌ನಲ್ಲಿ ನಡೆದಿದೆ. ಮೃತನನ್ನು ಭೋಪಾಲ್‌ನ ಟಿಐಟಿ ಕಾಲೇಜಿನ ಬಿಟೆಕ್ ವಿದ್ಯಾರ್ಥಿ ಉದಿತ್ ಎಂದು ಗುರುತಿಸಲಾಗಿದೆ. ಪೊಲೀಸರು ಆತನಿಗೆ ಹೊಡೆಯುತ್ತಿರುವ ವಿಡಿಯೊ ವೈರಲ್   ಆಗಿದೆ. ಘಟನೆಯ ವಿಡಿಯೊದಲ್ಲಿ ಪೊಲೀಸ್ ಒಬ್ಬರು ಆತನಿಗೆ ಕೋಲಿನಿಂದ ಹೊಡೆದಿದ್ದು, ಮತ್ತೊಬ್ಬ ಪೊಲೀಸರು ಆತನನ್ನು ಹಿಡಿದುಕೊಂಡಿದ್ದಾರೆ.

     ಘಟನೆಗೆ ಸಂಬಂಧಿಸಿದಂತೆ ಕಾನ್‌ಸ್ಟೇಬಲ್‌ಗಳಾದ ಸಂತೋಷ್ ಬಮಾನಿಯಾ ಮತ್ತು ಸೌರಭ್ ಆರ್ಯ ಅವರನ್ನು ಅಮಾನತು ಗೊಳಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭೋಪಾಲ್ ವಲಯ 2 ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ವಿವೇಕ್ ಸಿಂಗ್ ಹೇಳಿದ್ದಾರೆ.

    ಉದಿತ್ ತಂದೆ ಬಿಎಚ್‍ಇಎಲ್ ನೌಕರರಾಗಿದ್ದು, ತಾಯಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಆತನ ಭಾವ ಬಾಲಘಾಟ್ ನಕ್ಸಲ್ ವಿರೋಧಿ ಘಟಕದಲ್ಲಿ ಡಿಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುವಾರ ರಾತ್ರಿ ಇಂದ್ರಪುರಿಯಲ್ಲಿ ನಡೆದ ಪಾರ್ಟಿಯಲ್ಲಿ ಉದಿತ್ ಭಾಗವಹಿಸಿದ್ದಾಗಿ ಅವರ ಸ್ನೇಹಿತರು ತಿಳಿಸಿದ್ದಾರೆ. ಬೆಳಗಿನ ಜಾವ 1:30 ರ ಸುಮಾರಿಗೆ, ಒಬ್ಬ ಸ್ನೇಹಿತ ಆತನನ್ನು ಮನೆಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ, ಪೊಲೀಸರು ಅವರನ್ನು ಗಮನಿಸಿದರು. ಸ್ನೇಹಿತನ ಪ್ರಕಾರ, ಅಧಿಕಾರಿಗಳನ್ನು ನೋಡಿದ ಉದಿತ್ ಒಂದು ಓಣಿಗೆ ಓಡಿಹೋದನು. ಈ ವೇಳೆ ಇಬ್ಬರು ಪೊಲೀಸರು ಅವನನ್ನು ಹಿಂಬಾಲಿಸಿದರು.

   ರಾತ್ರಿ 11 ಗಂಟೆ ಸುಮಾರಿಗೆ ಉದಿತ್‍ನಿಂದ ಕರೆ ಬಂತು. ಪಾರ್ಟಿಗೆ ಹೋಗೋಣ ಅಂತ ಹೇಳಿದ. ಆಗ ನಾನು ಅವಧಪುರಿಯಲ್ಲಿದ್ದೆ. ಉದಿತ್ ನನ್ನನ್ನು ಇಂದ್ರಪುರಿಗೆ ಕರೆದರು. ಹಾಗಾಗಿ ನಾನು ಅಲ್ಲಿಗೆ ತಲುಪಿದೆ. ನಾವೆಲ್ಲರೂ ಒಟ್ಟಿಗೆ ಪಾರ್ಟಿ ಮಾಡಿದೆವು. ಸ್ವಲ್ಪ ಸಮಯದ ನಂತರ, ನಾನು ಉದಿತ್‍ನನ್ನು ಬಿಡಲು ಹೊರಟಿದ್ದೆ. ಈ ವೇಳೆ ಒಬ್ಬ ಪೊಲೀಸ್ ಬಂದರು. ಈ ವೇಳೆ ಉದಿತ್ ಇದ್ದಕ್ಕಿದ್ದಂತೆ ಭಯಭೀತನಾಗಿ ಕತ್ತಲೆಯ ಬೀದಿಯ ಕಡೆಗೆ ಓಡಿದನು. ಇಬ್ಬರು ಪೊಲೀಸರು ಅವನ ಹಿಂದೆ ಓಡಿ ಅವನನ್ನು ಹಿಡಿದರು ಎಂದು ಹೇಳಿದ್ದಾರೆ. 

   ಘಟನೆಯಿಂದ ಭೀತಿಗೊಂಡ ಆತನ ಸ್ನೇಹಿತರು ಸ್ಥಳಕ್ಕೆ ತಲುಪಿದಾಗ ಉದಿತ್‌ನ ಅಂಗಿ ಹರಿದಿರುವುದನ್ನು ಮತ್ತು ಅವನ ದೇಹವು ವಿಶೇಷವಾಗಿ ಅವನ ತಲೆಯ ಮೇಲೆ ಅನೇಕ ಗುರುತುಗಳನ್ನು ಹೊಂದಿತ್ತು. ಗಾಯಗೊಂಡ ಉದಿತ್‌ನನ್ನು ಕಾರಿಗೆ ಹತ್ತಿಸಲು ತಾನು ಸಹಾಯ ಮಾಡಿದೆ ಎಂದು ಸ್ನೇಹಿತ ಹೇಳಿದ್ದಾನೆ. ಇತರ ಇಬ್ಬರು ಸ್ನೇಹಿತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಪೊಲೀಸರು 10,000 ರೂ.ಗೆ ಬೇಡಿಕೆ ಇಟ್ಟರು ಎಂದು ಆರೋಪಿಸಿದ್ದಾರೆ.

   ನನ್ನ ಜೊತೆ ಕಾರಿನಲ್ಲಿದ್ದಾಗ, ಉದಿತ್ ಎಸಿ ಆನ್ ಮಾಡಿ ಸ್ವಲ್ಪ ನೀರು ಕೊಡುವಂತೆ ಕೇಳಿಕೊಂಡ. ಅವನು ಯಾವುದೇ ನೋವನ್ನು ಹೇಳಲಿಲ್ಲ. ದಾರಿಯಲ್ಲಿ ಎರಡರಿಂದ ಮೂರು ಬಾರಿ ವಾಂತಿ ಮಾಡಿಕೊಂಡ. ನಂತರ ಅವನ ಕೈ ಬಲಹೀನವಾಯಿತು. ನಾವು ನಾಡಿಮಿಡಿತವನ್ನು ಪರಿಶೀಲಿಸಿದೆವು. ಕೂಡಲೇ ಏನೋ ಆಗಿದೆ ಎಂದು ಏಮ್ಸ್‌ಗೆ ದಾಖಲಿಸಿದೆವು. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಸ್ನೇಹಿತನೊಬ್ಬ ತಿಳಿಸಿದ್ದಾನೆ.

   ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮತ್ತಷ್ಟು ಘಟನೆಯ ವಿವರಗಳು ಹೊರಬರಲಿವೆ. ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ನಗರ ಪೊಲೀಸ್ ವರಿಷ್ಠಾಧಿಕಾರಿ ಮಟ್ಟದ ಅಧಿಕಾರಿಯೊಬ್ಬರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ಸಿಂಗ್ ಹೇಳಿದರು.

Recent Articles

spot_img

Related Stories

Share via
Copy link