ಹಾಸನ:
ಬೂಕರ್ ಪ್ರಶಸ್ತಿ ವಿಜೇತ ಕತೆಗಾರ್ತಿ, ಸಾಹಿತಿ ಬಾನು ಮುಷ್ತಾಕ್ ಅವರು ನಿನ್ನೆ ಹಾಸನದ ಶ್ರೀ ಹಾಸನಾಂಬ ದೇವಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಆರತಿ ತೆಗೆದುಕೊಂಡು, ಪ್ರಸಾದ ಪಡೆದರು. ಬಾಲ್ಯದಿಂದಲೂ ಇಲ್ಲಿಗೆ ಬರುತ್ತಿರುತ್ತೇನೆ, ಇದು ಭಾವೈಕ್ಯತೆಯ ಸ್ಥಳ ಎಂದು ಸಾರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾನು ಮುಷ್ತಾಕ್ ಅವರು, ನಾನು ದರ್ಶನ ಪಡೆಯುತ್ತಿರುವುದು ಇದು ಮೊದಲನೇ ಬಾರಿ ಅಲ್ಲ. ದೇವಸ್ಥಾನ ನಮ್ಮ ಮನೆ ಮುಂದಿನ ಬೀದಿಯಲ್ಲಿದೆ. ಚಿಕ್ಕಂದಿನಿಂದಲೂ ತಾಯಿಯ ಕೈ ಬೆರಳು ಹಿಡಿದುಕೊಂಡು ದೇವಿ ದರ್ಶನಕ್ಕೆ ಬರ್ತಿದ್ದೆ. ಆಗ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಇಂದು ಗೊತ್ತಾಗುತ್ತಿದೆ. ಭಾವೈಕ್ಯತೆಯ ಸಂಕೇತ ಇದು ಎಂದರು.
ಬಹಳ ಹಿಂದಿನಿಂದಲೂ ಮುಸ್ಲಿಮರು ಹಾಸನಾಂಬೆಯನ್ನು ಹಸನ್ ಬಿ, ಹುಸೇನ್ ಬಿ ಎಂದು ನಂಬುವ ಕಾಲವಿತ್ತು. ನಮ್ಮ ಪೂರ್ವಿಕರು ಮುಸ್ಲಿಂ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದು ವಂದಿಸಲು ಹೇಳಿ ಕೊಡುತ್ತಿದ್ದರು. ಹಾಗಾಗಿ ಇದು ಭಾವೈಕ್ಯತೆಯ ಸ್ಥಳ ಎಂದರು.
ಈ ಸಲದ ಮೈಸೂರು ದಸರಾವನ್ನು ಬಾನು ಮುಷ್ತಾಕ್ ಉದ್ಘಾಟಿಸಿದ್ದರು. ಚಾಮುಂಡಿ ದೇವಿಯ ದರ್ಶನ ಮಾಡಿ ಆರತಿ ಪಡೆದುಕೊಂಡು ಪ್ರಸಾದ ಪಡೆದು ಸಾಂಪ್ರದಾಯಿಕ ರೀತಿಯಲ್ಲಿ ದಸರಾ ಉದ್ಘಾಟಿಸಿ ಭಾವೈಕ್ಯತೆಯ ಸಂದೇಶ ನೀಡಿದ್ದರು.
ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಹಾಸನಾಂಬ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದಿದ್ದರು. ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದ್ದು, ಸೋಮವಾರ ಒಂದೇ ದಿನ 1.5 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.








