ಬೆಂಗಳೂರಲ್ಲಿ ಪಟಾಕಿ ಸಿಡಿತದ ವೇಳೆ 8 ಜನರಿಗೆ ಗಾಯ….!

ಬೆಂಗಳೂರು:

    ನಗರದಲ್ಲಿ ದೀಪಾವಳಿ  ಆರಂಭದಲ್ಲೇ ಪಟಾಕಿ  ಸಿಡಿತದಿಂದ ಅವಘಡ ಸಂಭವಿಸಿದೆ. ಬೆಂಗಳೂರಲ್ಲಿ ಪಟಾಕಿ ಸಿಡಿದು ಮಕ್ಕಳು ಸೇರಿದಂತೆ ಒಟ್ಟು 8 ಜನರು  ಗಾಯಗೊಂಡಿದ್ದಾರೆ. ಪಟಾಕಿ ಸಿಡಿಸುವಾಗ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯರು ಆಗ್ರಹಿಸಿದ್ದಾರೆ.

    ಬೆಂಗಳೂರಲ್ಲಿ ಬಿಜಿಲಿ ಪಟಾಕಿ ಸಿಡಿದು 11 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದಾಗ ಮತ್ತೊಬ್ಬನಿಗೆ ಗಾಯವಾಗಿದೆ. ಆಟಂ ಬಾಂಬ್ ಪಟಾಕಿ ಸಿಡಿದು 48 ವರ್ಷದ ವ್ಯಕ್ತಿಯ ಕಣ್ಣಿಗೆ ಗಾಯವಾಗಿದೆ. ಅದೇ ರೀತಿಯಾಗಿ ಇನ್ನು 6 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಮಿಂಟೋ ಹಾಗು ನಾರಾಯಣ ನೇತ್ರಾಲಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

   ದೀಪಾವಳಿ  ಹಬ್ಬದ ಹಿನ್ನೆಲೆ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳು ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟು ಮಾಡಿ ಪರಿಸರಕ್ಕೆ ಹಾನಿ ಮಾಡುತ್ತಿದೆ. ಜೊತೆಗೆ ಜನರ ಆರೋಗ್ಯವನ್ನು ಹದಗೆಡಿಸುತ್ತಿದೆ. ಹೀಗಾಗಿ ಮಾಲನ್ಯ ರಹಿತವಾಗಿ ಆಚರಿಸಲು ಮನವಿ ಮಾಡಲಾಗಿದೆ.

   ಹಸಿರು ಪಟಾಕಿ ಮಾತ್ರ ಬಳಸಿ. ಪಟಾಕಿ ಬಾಕ್ಸ್‌ಗಳ ಮೇಲೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐರಆರ್) ಮತ್ತು ನ್ಯಾಷನಲ್ ಎನ್ವಿರಾನ್ಮೆಂ್ಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸಿಟಿಟ್ಯೂಟ್ ಇವರ ಲೋಗೋ ಹಾಗೂ ನೊಂದಾಯಿತ ಸಂಖ್ಯೆಯೊಂದಿಗೆ ಮುದ್ರಿತವಾಗಿರಬೇಕು.

   ಅಧಿಕೃತ ಮಾರಾಟಗಾರರು ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರದಿಂದ ನೀಡುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು. ನಿಷೇಧಿತ ಪಟಾಕಿಗಳ ಮಾರಾಟ ಕಂಡುಬಂದಲ್ಲಿ ಅಂತಹ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ನಿಯಮಗಳನ್ವಯ ಕಾನೂನು ಕ್ರಮಕೈಗೊಳ್ಳಲಾಗುವುದು.

   ಅಪಾರ್ಟ್ಮೆಂಟ್, ವಠಾರ, ನೆರೆಹೊರೆಯ ಮನೆಯವರು ಒಂದೆಡೆ ಕಲೆತು ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸಿ. ಹಬ್ಬದ ಆಚರಣೆಯಲ್ಲಿ ಬೆಳಕೇ ಪ್ರಧಾನವಾಗಿರಲಿ.ಗಿಡ, ಮರಗಳು ಮತ್ತು ಪ್ರಾಣಿ-ಪಕ್ಷಿಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಿ.ಶಾಶ್ವತ ಕುರುಡತನ, ಕಿವುಡುತನಗಳಿಗೆ ಎಡೆಮಾಡಿಕೊಡದಿರಿ.ಪಟಾಕಿಗಳನ್ನು ಖರೀದಿಸುವ ಹಸಿರು ಪಟಾಕಿಗಳ ಲೇಬಲ್‌ಗಳನ್ನು ಪರಿಶೀಲಿಸಿ ಖರೀದಿಸಬೇಕು. 125 ಡೆಸಿಬಲ್ ಶಬ್ದಕ್ಕಿಂತಲೂ ಮೇಲ್ಪಟ್ಟ ಪಟಾಕಿಗಳ ಸಿಡಿಸುವುದನ್ನು ನಿಷೇಧಿಸಲಾಗಿದೆ.

   ಶಿಕ್ಷಣ ಸಂಸ್ಥೆ, ಆಸ್ಪತ್ರೆ ಮತ್ತು ವೃದ್ದಾಶ್ರಮಗಳಂತಹ ಸೂಕ್ಷ್ಮ ಪ್ರದೇಶಗಳ ಹತ್ತಿರ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.ಪಟಾಕಿಗಳ ಸಿಡಿತದ ನಂತರ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು.ಸ್ಥಳೀಯ ಸಂಸ್ಥೆಗಳು ನಿಗಧಿಪಡಿಸಿದ ಕಸವನ್ನು ವಿಲೇವಾರಿ ಮಾಡುವ ವಾಹನಗಳಿಗೆ ನೀಡತಕ್ಕದ್ದು.

   ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ನಿರ್ದೇಶನದಂತೆ ಹಸಿರು ಪಟಾಕಿಯನ್ನು ಹೊರತುಪಡಿಸಿ ಇನ್ಯಾವುದೇ ಪಟಾಕಿಗಳನ್ನು ಹಬ್ಬದ ಸಮಯದಲ್ಲಿ ರಾತ್ರಿ 8 ಗಂಟೆಯಿಂದ 10 ವರೆಗೆ ಮಾತ್ರ ಪಟಾಕಿಗಳನ್ನು ಸ್ಪೋಟಿಸಲು ಅವಕಾಶ ನೀಡಿದ್ದು, ಉಳಿದ ಸಮಯದಲ್ಲಿ ಪಟಾಕಿಗಳ ಸ್ಪೋಟವನ್ನು ನಿಷೇಧಿಸಲಾಗಿದೆ.

Recent Articles

spot_img

Related Stories

Share via
Copy link