ನವದೆಹಲಿ:
ದೀಪಾವಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೀಪಗಳನ್ನು ಹಚ್ಚಿ, ಪಟಾಕಿಗಳನ್ನು ಸಿಡಿಸಿ ಹಬ್ಬದ ಸಂತೋಷವನ್ನು ಇಮ್ಮಡಿಗೊಳಿಸಲಾಗುತ್ತಿದೆ. ಬೆರಗುಗೊಳಿಸುವ ಅಲಂಕಾರಗಳಿಂದ ಹಿಡಿದು ಬಗೆ-ಬಗೆಯ ಖಾದ್ಯಗಳನ್ನು ತಯಾರಿಸುವವರೆಗೆ, ಬೆಳಕಿನ ಹಬ್ಬವನ್ನು ಸಂತೋಷದಿಂದ ಆಚರಿಸಲಾಗುತ್ತಿದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದು ನೆಟ್ಟಿಗರ ಮನಗೆದ್ದಿದೆ. ಯುವಕನೊಬ್ಬ ಡೆಲಿವರಿ ಬಾಯ್ಗಳಿಗೆ ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಿದ್ದಾನೆ.
ಗುಂಡೇಟಿ ಮಹೇಂದರ್ ರೆಡ್ಡಿ ಎಂಬ ಬಳಕೆದಾರರು ಪೋಸ್ಟ್ ಮಾಡಿದ ಇನ್ಸ್ಟಾಗ್ರಾಮ್ ವಿಡಿಯೊ ಅನೇಕರ ಹೃದಯಗಳನ್ನು ಗೆದ್ದಿದೆ. ವಿಡಿಯೊದಲ್ಲಿ, ಸ್ವಿಗ್ಗಿ, ಬ್ಲಿಂಕಿಟ್, ಜೆಪ್ಟೊ ಮತ್ತು ಬಿಗ್ಬಾಸ್ಕೆಟ್ನಂತಹ ಜನಪ್ರಿಯ ಅಪ್ಲಿಕೇಶನ್ನಿಂದ ಸಿಹಿತಿಂಡಿಗಳನ್ನು ರೆಡ್ಡಿ ಆರ್ಡರ್ ಮಾಡಿದ್ದಾರೆ. ನಂತರ ತಾನು ತರಿಸಿದ ಆರ್ಡರ್ಗಳನ್ನು ದೀಪಾವಳಿ ಹಬ್ಬದ ಪ್ರಯುಕ್ತ ಡೆಲಿವರಿ ಬಾಯ್ಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿಗೊಳಿಸಿದ್ದಾರೆ.
ʼಈ ದೀಪಾವಳಿಯಲ್ಲಿ, ಡೆಲಿವರಿ ಬಾಯ್ಗಳ ಮೊಗದಲ್ಲಿ ನಗು ತರುವುದಕ್ಕಾಗಿ ಈ ರೀತಿ ಮಾಡಲು ನಿರ್ಧರಿಸಿದ್ದೆ. ಬೇರೆ ಬೇರೆ ಅಪ್ಲಿಕೇಶನ್ಗಳಿಂದ ಸಿಹಿತಿಂಡಿಗಳನ್ನು ಆರ್ಡರ್ ಮಾಡಿದೆವು. ಪ್ರತಿದಿನ ಸಂತೋಷವನ್ನು ನೀಡುವ ಡೆಲಿವರಿ ಬಾಯ್ಗಳಿಗೆ ಅವುಗಳನ್ನು ಉಡುಗೊರೆಯಾಗಿ ನೀಡಿದೆವು. ಸ್ವಿಗ್ಗಿ, ಬ್ಲಿಂಕಿಟ್, ಜೆಪ್ಟೊ ಮತ್ತು ಬಿಗ್ಬಾಸ್ಕೆಟ್ನಿಂದ ದೀಪಾವಳಿಗೆ ಸಿಹಿತಿಂಡಿಗಳನ್ನು ಆರ್ಡರ್ ಮಾಡಿದ್ದೇವೆ. ಅವುಗಳನ್ನು ತಂದ ಡೆಲಿವರಿ ಬಾಯ್ಗಳಿಗೆ ಅದನ್ನು ನೀಡಿದ್ದೇವೆʼʼ ಎಂದು ಕ್ಯಾಪ್ಶನ್ನಲ್ಲಿ ಬರೆಯಲಾಗಿದೆ.
ಗೌಪ್ಯತೆಯ ದೃಷ್ಟಿಯಿಂದ ಡೆಲಿವರಿ ಬಾಯ್ಗಳ ಮುಖವನ್ನು ತೋರಿಸಲಾಗಿಲ್ಲ. ಆದರೆ ಅವರು ಆಶ್ಚರ್ಯದಿಂದ ಹಾಗೂ ಸಂತೋಷದಿಂದ ಸ್ವೀಕರಿಸಿದ್ದಾರೆ. ಹಬ್ಬದ ಋತುವಿನಲ್ಲೂ ದಣಿವರಿಯದೆ ಕೆಲಸ ಮಾಡುವ ಡೆಲಿವರಿ ಬಾಯ್ಗಳಿಗೆ ಸಿಹಿತಿಂಡಿ ನೀಡಿರುವುದು ನೆಟ್ಟಿಗರ ಮನಗೆದ್ದಿದೆ. ಒಬ್ಬ ಬಳಕೆದಾರರು, ಅಂತಿಮವಾಗಿ ಯಾರೋ ಒಬ್ಬರು ತಮ್ಮ ಪ್ರಯತ್ನಗಳಿಗೆ ಪ್ರತಿಫಲ ನೀಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ನಾನು ದೀಪಾವಳಿ ಮತ್ತು ಹೋಳಿಯಂದು ಈ ರೀತಿ ಸಿಹಿತಿಂಡಿ ಹಂಚುತ್ತೇನೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ಶಾಪಿಂಗ್ ಅಪ್ಲಿಕೇಶನ್ಗಳು ದಾಖಲೆಯ ಆರ್ಡರ್ಗಳನ್ನು ಸ್ವೀಕರಿಸುತ್ತಿರುವ ಈ ಹಬ್ಬದ ಋತುವಿನಲ್ಲಿ, ಪ್ರತಿ ಪ್ಯಾಕೇಜ್ ಸಮಯಕ್ಕೆ ಸರಿಯಾಗಿ ತಲುಪಲು ಡೆಲಿವರಿ ಬಾಯ್ಗಳು ದೀರ್ಘ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಹೀಗಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ರೆಡ್ಡಿಯ ಈ ಸಹಾನುಭೂತಿಯಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಹಬ್ಬವು ಕೇವಲ ದೀಪಗಳು ಮತ್ತು ಅಲಂಕಾರಗಳ ಬಗ್ಗೆ ಅಲ್ಲ, ಸಂತೋಷವನ್ನು ಹಂಚಿಕೊಳ್ಳುವ ಉದ್ದೇಶವನ್ನೂ ಹೊಂದಿದೆ ಎನ್ನುವುದನ್ನು ಈ ಘಟನೆ ಒತ್ತಿ ಹೇಳಿದೆ.
