ದುಬೈ:
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ, ಪಾಕ್ ಗೃಹ ಸಚಿವ ಮೊಹ್ಸಿನ್ ನಖ್ವಿ ಏಷ್ಯಾಕಪ್ ಟ್ರೋಫಿ ಹಸ್ತಾಂತರಿಸುವ ವಿಚಾರದಲ್ಲಿ ಮತ್ತೆ ಉದ್ಧಟತನ ಮುಂದುವರಿಸಿದ್ದಾರೆ. ಶನಿವಾರ ಬಿಸಿಸಿಐ ಇ-ಮೇಲ್ ಮೂಲಕ ಏಷ್ಯಾಕಪ್ ಟ್ರೋಫಿ ನೀಡುವಂತೆ ಮತ್ತು, ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿತ್ತು.
ಇದಕ್ಕೆ ಉತ್ತರಿಸಿದ ನಖ್ವಿ, ಬಿಸಿಸಿಐ ಭಾರತ ತಂಡದ ಯಾರಾದರೂ ಒಬ್ಬ ಆಟಗಾರನನ್ನು ಕಳುಹಿಸಿದರೆ ಅವರ ಕೈಗೆ ಟ್ರೋಫಿ ಕೊಡಬಹುದು. ನವೆಂಬರ್ ಮೊದಲ ವಾರದಲ್ಲಿ ಇದಕ್ಕಾಗಿ ಒಂದು ಕಾರ್ಯಕ್ರಮ ಆಯೋಜಿಸಬಹುದು ಎಂದು ನಖ್ವಿ ಬಿಸಿಸಿಐಗೆ ತಿಳಿಸಿದ್ದಾಗಿ ಪಾಕ್ ಪತ್ರಕರ್ತ ಫೈಜಾನ್ ಲಖಾನಿ ಹೇಳಿದ್ದಾರೆ. ಏಷ್ಯಾಕಪ್ ಟ್ರೋಫಿ ಈಗಲೂ ದುಬೈನಲ್ಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಧಾನ ಕಚೇರಿಯಲ್ಲಿದೆ.
ಏಷ್ಯಾಕಪ್ ಟ್ರೋಫಿ ವಿವಾದದ ಬಗ್ಗೆ ಬಿಸಿಸಿಐ ಮತ್ತೊಮ್ಮೆ ಟ್ರೋಫಿ ಹಸ್ತಾಂತರಿಸುವಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಪತ್ರ ಬರೆದಿತ್ತು. ಇದಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರು, ನವೆಂಬರ್ ಮೊದಲ ವಾರದಲ್ಲಿ ಕಾರ್ಯಕ್ರಮ ಆಯೋಜಿಸಿ, ಅಲ್ಲಿ ಆಟಗಾರನೊಬ್ಬನ ಕೈಗೆ ಟ್ರೋಫಿ ಹಸ್ತಾಂತರಿಸುವುದಾಗಿ ಉತ್ತರಿಸಿದ್ದಾರೆ ಎಂದು ಲಖಾನಿ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ವರದಿಯೊಂದರ ಪ್ರಕಾರ, ಬಿಸಿಸಿಐ ನಖ್ವಿಯನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯೋಚಿಸುತ್ತಿದ್ದು, ಅದಕ್ಕಾಗಿ ಮಂಡಳಿಯಲ್ಲಿರುವ ಇತರ ಸದಸ್ಯರ ಬೆಂಬಲ ಪಡೆಯಲು ಮುಂದಾಗಿದೆ ಎನ್ನಲಾಗಿದೆ. ಶ್ರೀಲಂಕಾ ಮಂಡಳಿ ಭಾರತದ ಪರ ನಿಂತಿದ್ದರೆ, ಪಾಕಿಸ್ತಾನಕ್ಕೆ ಬಾಂಗ್ಲಾ ತನ್ನ ಬೆಂಬಲ ನೀಡಿದೆ ಎನ್ನಲಾಗಿದೆ. ಇತ್ತೀಚೆಗೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ ಬಳಿಕ ಆಪ್ಘಾನಿಸ್ತಾನದ ಮತ ಭಾರತಕ್ಕೆ ಬೀಳಲಿದೆ. ನಖ್ವಿ ಏಪ್ರಿಲ್‌ನಿಂದ ಎಸಿಸಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
