ಅಡಿಲೇಡ್:
ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಅವರು ಮತ್ತೆ ಹಳೆಯ ಬ್ಯಾಟಿಂಗ್ ಫಾರ್ಮ್ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಜತೆಗೆ ಹಲವು ದಾಖಲೆಯ ಮೈಲುಗಲ್ಲು ನೆಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲಿ 1000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮ ಪಾತ್ರರಾಗಿದ್ದಾರೆ. ಅವರು 21 ಇನ್ನಿಂಗ್ಸ್ಗಳಲ್ಲಿ 56.36 ಸರಾಸರಿಯಲ್ಲಿ ನಾಲ್ಕು ಶತಕಗಳು ಮತ್ತು ಮೂರು ಅರ್ಧಶತಕಗಳೊಂದಿಗೆ 1071* ರನ್ ಗಳಿಸಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ರನ್ ಗಳಿಸಿದ ಯಾದಿಯಲ್ಲಿ ರೋಹಿತ್ ಅವರು ಸೌರವ್ ಗಂಗೂಲಿ(9146) ಮತ್ತು ಆ್ಯಡಂ ಗಿಲ್ಕ್ರಿಸ್ಟ್(9200) ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ರೋಹಿತ್ 9219* ರನ್ ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್(15310) ಮೊದಲ ಸ್ಥಾನದಲ್ಲಿದ್ದಾರೆ.
ಅಡಿಲೇಡ್ ಪಂದ್ಯದ ಆರಂಭಿಕ ಹಂತದಲ್ಲಿ ನಿಧಾನ ಗತಿಯ ಬ್ಯಾಟಿಂಗ್ ನಡೆಸಿದ ರೋಹಿತ್, 25 ರನ್ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದರು. 7 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 73 ರನ್ ಗಳಿಸಿದರು. ತಂಡದ ಪರ ಇವರದ್ದೇ ಗರಿಷ್ಠ ಸ್ಕೋರ್. ಶ್ರೇಯಸ್ ಅಯ್ಯರ್ ಜತೆ ಮೂರನೇ ವಿಕೆಟ್ಗೆ 118 ರನ್ ಒಟ್ಟುಗೂಡಿಸಿದರು. ಅಯ್ಯರ್ 61 ರನ್ ಗಳಿಸಿದರು.
