ಪಟನಾ:
ಬಿಹಾರ ವಿಧಾನಸಭಾ ಚುನಾವಣೆ ದಿನೇ ದಿನೆ ರಂಗೇರುತ್ತಿದ್ದು, ಎನ್‌ಡಿಎ ಹಾಗೂ ಮಹಾಘಟಬಂಧನಗಳ ನಡುವಿನ ನೇರ ಹಣಾಹಣಿಯ ಕಾವು ಏರುತ್ತಲೇ ಇದೆ. ಇದರ ನಡುವೆ ಉಭಯ ಬಣಗಳಲ್ಲೂ ಸೀಟು ಹಂಚಿಕೆ ಬಿಕ್ಕಟ್ಟು, ಸಿಎಂ ಅಭ್ಯರ್ಥಿ ಯಾರೆಂಬ ಚರ್ಚೆ, ಅಸಮಾಧಾನ ಇವೆಲ್ಲವೂ ನಡೆಯುತ್ತಲೇ ಇವೆ. ತಮ್ಮ ತಮ್ಮ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲ ಎರಡೂ ಬಣಗಳು ಹರ ಸಾಹಸಪಡುತ್ತಿವೆ.
ಅತಿ ಹೆಚ್ಚು ಆಂತರಿಕ ಬಿಕ್ಕಟ್ಟು ಹೊಂದಿದೆ ಎನ್ನಲಾಗಿರುವ ಮಹಾಘಟಬಂಧನದಲ್ಲಿ ಸೀಟು ಹಂಚಿಕೆ ವಿಚಾರಕ್ಕಿಂತಲೂ ಹೆಚ್ಚಾಗಿ ಸಿಎಂ ಅಭ್ಯರ್ಥಿ ಯಾರೆಂಬ ಚರ್ಚೆಯೇ ಜೋರಾಗಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಮಹಾಘಟಬಂಧನದ ನಾಯಕರು ಸರ್ವಾನುಮತದಿಂದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.
ಚುನಾವಣೆಗೂ ಮುನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾದ, ಮಹಾಘಟಬಂಧನ್ ನಾಯಕರು ಗುರುವಾರ ತಮ್ಮ ಮೊದಲ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ, ಆಡಳಿತಾರೂಢ NDA ವಿರುದ್ಧ ಒಗ್ಗಟ್ಟಿನ ಸಂದೇಶವನ್ನು ರವಾನಿಸಿದರು. ಇದೇ ಪತ್ರಿಕಾಗೋಷ್ಟಿಯಲ್ಲಿ ತೇಜಸ್ವಿ ಯಾದವ್ ಅವರನ್ನು ಮಹಾಘಟಬಂಧನದ ನಾಯಕರು ಅವಿರೋಧವಾಗಿ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಆ ಮೂಲಕ ಬಿಜೆಪಿಗೆ ಠಕ್ಕರ್ ಕೊಟ್ಟಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಬಿಹಾರ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ರಾಮ್, ಒಕ್ಕೂಟದ ಒಗ್ಗಟ್ಟನ್ನು ದೃಢಪಡಿಸಿದರು, ಇಂಡಿ ಒಕ್ಕೂಟದ ಮಿತ್ರ ಪಕ್ಷಗಳ ನಾಯಕರ ಜೊತೆ ರಾಹುಲ್ ಗಾಂಧಿ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ನಾವು ಒಟ್ಟಾಗಿ ಬಂದು ಭಾರತ ಮೈತ್ರಿಕೂಟದ ಅಡಿಯಲ್ಲಿ ಸರ್ಕಾರವನ್ನು ರಚಿಸುತ್ತೇವೆ ಎಂದು ಹೇಳಿದರು.
“ಎಲ್ಲಾ ಹಿರಿಯ ನಾಯಕರೊಂದಿಗೆ ಚರ್ಚಿಸಿದ ನಂತರ, ಮುಂಬರುವ ಬಿಹಾರ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಅವರನ್ನು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ನಾವು ನಿರ್ಧರಿಸಿದ್ದೇವೆ. ಅವರಿಗೆ ದೀರ್ಘ ಭವಿಷ್ಯವಿದೆ” ಎಂದು ಮಹಾಘಟಬಂಧನದಲ್ಲಿನ ಬಿರುಕುಗಳ ನಡುವೆ ಸಮಸ್ಯೆ ನಿವಾರಣೆಗೆ ಪಟನಾಕ್ಕೆ ಆಗಮಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಹೇಳಿದರು.
ಈ ಬಾರಿ ಮಹಾಘಟಬಂಧನ ಬಣದಲ್ಲಿ ಪ್ರಬಲ ಪಕ್ಷವಾದ ಆರ್‌ಜೆಡಿ 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ 61 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಉಳಿದ ಸ್ಥಾನಗಳನ್ನು ಸಿಪಿಐ(ಎಂಎಲ್), ಸಹಾನಿಯ ವಿಐಪಿ ಮತ್ತು ಸಣ್ಣ ಮಿತ್ರಪಕ್ಷಗಳು ಹಂಚಿಕೊಳ್ಳುತ್ತಿವೆ.
