ನವದೆಹಲಿ:
ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ದಾವೂದ್ ಇಬ್ರಾಹಿಂ ನ ಡ್ರಗ್ ಜಾಲದ ವಿರುದ್ಧ ನಡೆಯುತ್ತಿರುವ ದಾಳಿಯ ಭಾಗವಾಗಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಗೋವ ದಲ್ಲಿ ಆತನ ಸಹಚರ ಡ್ಯಾನಿಶ್ ಚಿಕ್ನಾ ಎಂಬಾತನನ್ನು ಬಂಧಿಸಿದೆ. ಆತ ದಾವೂದ್ ಇಬ್ರಾಹಿಂನ ಆಪ್ತ ಹಾಗೂ ಭಾರತದಲ್ಲಿನ ಡ್ರಗ್ ನೆಟ್ವರ್ಕ್ನ ಮ್ಯಾನೇಜರ್ ಆಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್ಸಿಬಿ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ಡ್ಯಾನಿಶ್ ಚಿಕ್ನಾನಿಗಾಗಿ ಶೋಧಕಾರ್ಯ ನಡೆಸಿದ್ದರು.
ಇದಕ್ಕೂ ಮುನ್ನ, ಅಕ್ಟೋಬರ್ 23ರಂದು ದುಬೈ ಮೂಲದ ಹ್ಯಾಂಡ್ಲರ್ ಮೊಹಮ್ಮದ್ ಸಲೀಂ ಶೇಖ್ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ಬಂಧಿಸಿದ್ದರು. ಶೇಖ್, ದಾವೂದ್ ಇಬ್ರಾಹಿಂನ ಸಹಚರ ಸಲೀಂ ಡೋಲಾ ಜೊತೆ ಸೇರಿ ಮಹಾರಾಷ್ಟ್ರ ದಲ್ಲಿ ಮೆಫೆಡ್ರೋನ್ ಉತ್ಪಾದನೆ ಮತ್ತು ಸರಬರಾಜು ಜಾಲವನ್ನು ನಿರ್ವಹಿಸುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಶೇಖ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಯುಎಇಯಿಂದ ಭಾರತಕ್ಕೆ ಹಸ್ತಾಂತರಗೊಂಡ ನಂತರ, ಅಕ್ಟೋಬರ್ 22ರಂದು ಅವರನ್ನು ಅಧಿಕೃತವಾಗಿ ಬಂಧಿಸಲಾಯಿತು. ಅಲ್ಲದೇ ಶೇಖ್ ಮತ್ತು ಡೋಲಾ ಇಬ್ಬರೂ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತರಾಗಿದ್ದರು ಎಂದು ವರದಿಗಳು ತಿಳಿಸಿವೆ.
ಶೇಖ್ ಸಾಂಗ್ಲಿಯಲ್ಲಿದ್ದ ಪ್ರಮುಖ MD (ಮೆಫೆಡ್ರೋನ್) ಉತ್ಪಾದನಾ ಘಟಕದ ಸರಬರಾಜನ್ನು ನೋಡಿಕೊಳ್ಳುತ್ತಿದ್ದ. ಯುಎಇ ಮೂಲದ ರಾಸಾಯನಿಕ ಪೂರೈಕೆದಾರರಿಂದ ಕಚ್ಚಾ ವಸ್ತುಗಳನ್ನು ತರಿಸಿ, ಭಾರತದಲ್ಲಿ ಸಂಶ್ಲೇಷಿತ ಡ್ರಗ್ ತಯಾರಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿ 2024ರಲ್ಲಿ ಮುಂಬೈನ ಕುರ್ಳಾದಲ್ಲಿ ಪರ್ವೀನ್ ಶೇಖ್ ಬಂಧನದಿಂದ ಪ್ರಕರಣದ ತನಿಖೆ ಆರಂಭವಾಗಿತ್ತು. ಅಲ್ಲಿ ಪರ್ವೀನ್ ಬಳಿ ಇದ್ದ 641 ಗ್ರಾಂ ಮೆಫೆಡ್ರೋನ್ ಮತ್ತು 12 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.
ಡ್ರಗ್ಗಳನ್ನು ದುಬೈ ಮೂಲದ ಸಲೀಂ ಶೇಖ್ ಹಾಗೂ ಸಲೀಂ ಡೋಲಾ ಅವರ ಜಾಲದ ಮೂಲಕ ಖರೀದಿಸಿದ್ದಾಗಿ, ವಿಚಾರಣೆ ವೇಳೆ ಪರ್ವೀನ್ ಒಪ್ಪಿಕೊಂಡಿದ್ದಾಳೆ. ನಂತರ ಮಿರಾ ರೋಡ್ ನಿವಾಸಿ ಸಾಜೀದ್ ಅಸೀಫ್ ಶೇಖ್ ಅಲಿಯಾಸ್ ಡ್ಯಾಬ್ಸ್ನನ್ನು ಬಂಧಿಸಲಾಗಿದ್ದು, ಅವನ ಮನೆಯಿಂದ 6 ಕೋಟಿ ರೂ. ಮೌಲ್ಯದ 3 ಕೆಜಿ ಮೆಫೆಡ್ರೋನ್, 3.68 ಲಕ್ಷ ನಗದು ವಶಪಡಿಸಿಕೊಳ್ಳಲಾಯಿತು.
ಇದುವರೆಗೆ ಒಟ್ಟು 15 ಮಂದಿಯನ್ನು ಬಂಧಿಸಿ, 256.49 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ಮತ್ತು ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ₹252 ಕೋಟಿ ಮೌಲ್ಯದ 126 ಕೆಜಿ ಮೆಫೆಡ್ರೋನ್ , 4.19 ಕೋಟಿ ನಗದು, ಚಿನ್ನಾಭರಣ, ವಾಹನಗಳು ಮತ್ತು ಅಕ್ರಮ ಆಸ್ತಿಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.








