ರಾಂಚಿ:
ಜಾರ್ಖಂಡ್ನ ಚೈಬಾಸಾ ಪಟ್ಟಣದಲ್ಲಿ ವೈದ್ಯರ ಎಡವಟ್ಟಿನಿಂದ ಘೋರ ದುರಂತವೊಂದು ನಡೆದಿತ್ತು. ಥಲಸೇಮಿಯಾ ಪೀಡಿತ ಮಕ್ಕಳಿಗೆ ಸ್ಥಳೀಯ ರಕ್ತ ನಿಧಿಯಿಂದ ರಕ್ತ ಪಡೆದು ವರ್ಗಾವಣೆ ನಂತರ ಎಚ್ಐವಿ ಸೋಂಕು ತಗುಲಿದೆ. ಏಳು ವರ್ಷದ ಮಗುವಿಗೆ ಸೋಂಕಿತ ರಕ್ತ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ಇದೀಗ ಮಕ್ಕಳ ಬಳಿಕ ನಾಲ್ವರು ರಕ್ತದಾನಿಗಳಿಗೆ ಹೆಚ್ಐವಿ ಸೋಂಕು ತಲುಲಿದೆ ಎಂದು ತಿಳಿದು ಬಂದಿದೆ. ಮಕ್ಕಳಿಗೆ ಎಚ್ಐವಿ ಪಾಸಿಟಿವ್ ಬಂದ ನಂತರ 2023 ಮತ್ತು 2025 ರ ನಡುವೆ 259 ದಾನಿಗಳಿಂದ ಸಂಗ್ರಹಿಸಲಾದ ರಕ್ತದ ಮಾದರಿಗಳನ್ನು ಮರು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಒಟ್ಟು ಮಾದರಿಗಳಲ್ಲಿ 44 ಮಾದರಿಗಳನ್ನು ಪರೀಕ್ಷಿಸಲಾಯಿತು ಮತ್ತು ನಾಲ್ವರು ದಾನಿಗಳು ಎಚ್ಐವಿ ಪಾಸಿಟಿವ್ ಆಗಿದ್ದಾರೆ. ಈ ವಿವರಗಳನ್ನು ರಾಜ್ಯದ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಹಂಚಿಕೊಂಡಿದ್ದಾರೆ. ರಕ್ತ ವರ್ಗಾವಣೆಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಅನುಸರಿಸದಿದ್ದಕ್ಕಾಗಿ ಜಾರ್ಖಂಡ್ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಚೈಬಾಸಾ ಜಿಲ್ಲೆಯ ಐದು ಮಕ್ಕಳಿಗೆ ರಕ್ತ ವರ್ಗಾವಣೆಯಿಂದ ಎಚ್ಐವಿ ಪಾಸಿಟಿವ್ ಕಂಡುಬಂದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಮುಖ್ಯ ನ್ಯಾಯಮೂರ್ತಿ ತರ್ಲೋಕ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ರಾಜೇಶ್ ಶಂಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಾ, ಆರೋಗ್ಯ ಕಾರ್ಯದರ್ಶಿ ಅಜಯ್ ಕುಮಾರ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿತು.
ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ರಕ್ತದಾನ ಶಿಬಿರಗಳ ವಿವರಗಳನ್ನು ಅಫಿಡವಿಟ್ ಸಲ್ಲಿಸಿ ಪೀಠಕ್ಕೆ ತಿಳಿಸುವಂತೆ ನ್ಯಾಯಾಲಯ ಆರೋಗ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ. ಆಸ್ಪತ್ರೆಗಳಲ್ಲಿ ರಕ್ತದ ಬೇಡಿಕೆ ಮತ್ತು ರಕ್ತನಿಧಿಗಳು ಒದಗಿಸುವ ಪ್ರಮಾಣದ ಬಗ್ಗೆಯೂ ನ್ಯಾಯಾಲಯ ಮಾಹಿತಿ ಕೇಳಿದೆ. ವಿಚಾರಣೆಯ ಸಂದರ್ಭದಲ್ಲಿ, ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆ (NAT) ನಡೆಸಲು ಸುಧಾರಿತ ಸ್ಕ್ರೀನಿಂಗ್ ಯಂತ್ರಗಳನ್ನು ಆಸ್ಪತ್ರೆಗಳಲ್ಲಿ ಏಕೆ ಸ್ಥಾಪಿಸಲಾಗಿಲ್ಲ ಎಂದು ತಿಳಿಸುವಂತೆ ನ್ಯಾಯಪೀಠ ಸರ್ಕಾರಕ್ಕೆ ಆದೇಶಿಸಿತು.
ಪ್ರಸ್ತುತ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ 515 ಎಚ್ಐವಿ ಪಾಸಿಟಿವ್ ಪ್ರಕರಣಗಳು ಮತ್ತು 56 ಥಲಸೇಮಿಯಾ ರೋಗಿಗಳಿದ್ದಾರೆ ಎಂದು ಹೇಳಲಾಗಿದೆ. ಡಾ. ಶಿಪ್ರಾ ದಾಸ್, ಡಾ. ಎಸ್.ಎಸ್. ಪಾಸ್ವಾನ್, ಡಾ. ಭಗತ್, ಜಿಲ್ಲಾ ಸಿವಿಲ್ ಸರ್ಜನ್ ಡಾ. ಸುಶಾಂತೋ ಮಾಝೀ, ಡಾ. ಶಿವಚರಣ್ ಹನ್ಸದಾ ಮತ್ತು ಡಾ. ಮೀನು ಕುಮಾರಿ ಅವರನ್ನೊಳಗೊಂಡಿದ್ದ ತನಿಖಾ ತಂಡವನ್ನು ರಚಿಸಲಾಗಿದೆ.

 


