ಅರ್ಚಕರ ಕುಟುಂಬ ಸಾಮೂಹಿಕ ಆತ್ಮಹತ್ಯೆ ಯತ್ನ, ಇಬ್ಬರ ಸಾವು, ಇನ್ನಿಬ್ಬರು ಗಂಭೀರ

ದೇವನಹಳ್ಳಿ

     ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ  ತಾಲೂಕಿನ ಹೆಗ್ಗನಹಳ್ಳಿಯಲ್ಲಿ ಪೌರೋಹಿತ್ಯ ಮಾಡಿಕೊಂಡಿದ್ದ ಅರ್ಚಕ ಸಮುದಾಯದ ಕುಮಾರಪ್ಪ ಎಂಬವರ ಇಡೀ ಕುಟುಂಬ ಗುರುವಾರ ಆತ್ಮಹತ್ಯೆಗೆ ಯತ್ನಿಸಿದೆ. ಈ ಘಟನೆ ಇಡೀ ಗ್ರಾಮದ ಜನತೆಯನ್ನು ಬೆಚ್ಚಿಬೀಳಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ದೇವರ ಪೂಜೆ ಮಾಡಿಕೊಂಡು ಇದ್ದ ಕುಟುಂಬದಲ್ಲಿ ಏಕಾಏಕಿ ಅದೇನಾಯಿತೋ ಗೊತ್ತಿಲ್ಲ, ಗುರುವಾರ ಸಂಜೆ ಇದ್ದಕ್ಕಿದ್ದಂತೆ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

     60 ವರ್ಷ ವಯಸ್ಸಿನ ಕುಮಾರಪ್ಪ, ಇವರ ಪತ್ನಿ 55 ವರ್ಷದ ರಮಾ ಮತ್ತು ಗಂಡು ಮಕ್ಕಳಾದ ಅಕ್ಷಯ್ ಹಾಗೂ ಅರುಣ್ ಸಾಮೂಹಿಕವಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಹಿರಿಯ ಮಗ ಕ್ರೀಮಿನಾಶಕ ಸೇವಿಸಿ ನಂತರ ನೇಣಿಗೆ ಶರಣಾಗಿದ್ದಾನೆ. ತಂದೆ ಕುಮಾರಪ್ಪ ಹಾಗೂ ಹಿರಿಯ ಮಗ ಅರುಣ್ ಸಾವನ್ನಪ್ಪಿದ್ದು, ಅರಚಾಡುತ್ತಾ ವಿಲವಿಲ ಒದ್ದಾಡುತ್ತಿದ್ದ ತಾಯಿ ರಮಾ ಹಾಗೂ ಕಿರಿಯ ಮಗನನ್ನು ಸ್ಥಳೀಯರು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ. 

   ಮನೆಯ ಹಾಲ್‌ನಲ್ಲಿ ಮದ್ಯದ ಬಾಟಲಿ ಮತ್ತು ಕ್ರಿಮಿನಾಶಕಗಳ ಬಾಟಲಿಗಳು ಪತ್ತೆಯಾಗಿವೆ. ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಚಿಕ್ಕಜಾಲ ಪೊಲೀಸರು ಹಾಗೂ ದೇವನಹಳ್ಳಿ ಎಸಿಪಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣವೇನಿರಬಹುದು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಲದಬಾಧೆಯೇ ಕಾರಣವೇ ಅಥವಾ ಬೇರೆ ಕಾರಣವಿದೆಯಾ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Recent Articles

spot_img

Related Stories

Share via
Copy link