ನವದೆಹಲಿ:
ಇಂದು ನಡೆಯಲಿರುವ ಪ್ರೊ ಕಬಡ್ಡಿ ಲೀಗ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ದಬಾಂಗ್ ಡೆಲ್ಲಿ ಹಾಗೂ ಪುಣೇರಿ ಪಲ್ಟನ್ ಪ್ರಶಸ್ತಿಗಾಗಿ ಸೆಣಸಾಡಲಿವೆ. ಕ್ವಾಲಿಫೈಯರ್-1ರಲ್ಲಿ ಪುಣೇರಿ ತಂಡವನ್ನು ಟೈ-ಬ್ರೇಕರ್‌ನಲ್ಲಿ 6-4 ಅಂತರದಿಂದ ಮಣಿಸಿ ದಬಾಂಗ್ ಡೆಲ್ಲಿ ಫೈನಲ್ ಪ್ರವೇಶಿಸಿತ್ತು. ಈ ಸೋಲಿಗೆ ಪುಣೇರಿ ತಂಡ ಫೈನಲ್‌ನಲ್ಲಿ ಸೇಡು ತೀರಿಸಿಕೊಂಡಿತೇ ಎಂಬುದು ಪಂದ್ಯದ ಕುತೂಹಲ. ಪಂದ್ಯ ಆರಂಭ, ಪ್ರಸಾರದ ಕುರಿತ ಮಾಹಿತಿ ಇಲ್ಲಿದೆ.
ಪುಣೇರಿ ಪಲ್ಟನ್ ಮತ್ತು ದಬಾಂಗ್ ದೆಹಲಿ ಕೆ.ಸಿ. ನಡುವಿನ ಪಿಕೆಎಲ್ 2025 ಫೈನಲ್ ಪಂದ್ಯವು ಅಕ್ಟೋಬರ್ 31, ಶುಕ್ರವಾರದಂದು ನಡೆಯಲಿದೆ. ಫೈನಲ್ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಪ್ರಾರಂಭವಾಗುತ್ತದೆ. ಪಂದ್ಯ ಹೆದಲಿಯ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
ಲೀಗ್ ಹಂತದಲ್ಲಿ ಎರಡನೇ ಸ್ಥಾನ ಪಡೆದಿದ್ದ ದೆಹಲಿ ತಂಡ, ಕ್ವಾಲಿಫೈಯರ್ 1 ರಲ್ಲಿ ಟೇಬಲ್-ಟಾಪರ್ ಪುಣೇರಿ ಪಲ್ಟನ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಆದಾಗ್ಯೂ, ಪಲ್ಟನ್ ತಂಡವು ಕ್ವಾಲಿಫೈಯರ್ 2 ರಲ್ಲಿ ತೆಲುಗು ಟೈಟಾನ್ಸ್ ತಂಡವನ್ನು ಸೋಲಿಸಿ ಪೈನಲ್ ಪ್ರವೇಶಿಸಿತ್ತು.
ಪುಣೇರಿ ಪಲ್ಟನ್ ತಂಡವು 10ನೇ ಸೀಸನ್‌ನಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಫೈನಲ್‌ನಲ್ಲಿ ಸೋಲಿಸುವ ಮೂಲಕ ಚೊಚ್ಚಲ ಪಿಕೆಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ದಬಾಂಗ್ ಡೆಲ್ಲಿ ತಂಡವು 8ನೇ ಸೀಸನ್‌ನಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು ಸೋಲಿಸಿ ಮೊದಲ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.
ಪುಣೇರಿ ಪಲ್ಟನ್ ಮತ್ತು ದಬಾಂಗ್ ಡೆಲ್ಲಿ ಕೆ.ಸಿ. ತಂಡಗಳು ಈ ಋತುವಿನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ಸಾರಸ್ಯವೆಂದರೆ ಈ ಮೂರು ಪಂದ್ಯಗಳು ಕೂಡ ಟೈ-ಬ್ರೇಕರ್ ಕಂಡಿತ್ತು. ವೈಜಾಗ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಡೆಲ್ಲಿ ಗೋಲ್ಡನ್ ರೈಡ್‌ನೊಂದಿಗೆ ಗೆದ್ದುಕೊಂಡಿತ್ತು. ಆ ಬಳಿಕ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಪುಣೇರಿ ಗೆದಿತ್ತು. ಕ್ವಾಲಿಫೈಯರ್ 1 ರಲ್ಲಿ ಡೆಲ್ಲಿ ಮೇಲುಗೈ ಸಾಧಿಸಿತ್ತು. ಫೈನಲ್ ಪಂದ್ಯ ಕೂಡ ಟೈ-ಬ್ರೇಕರ್‌ಗೆ ಸಾಗೀತೇ ಎಂದು ಕಾದು ನೋಡಬೇಕಿದೆ.
ಪಿಕೆಎಲ್ 2025 ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

 


