ಹೈದರಾಬಾದ್:
2015 ರಲ್ಲಿ ಚಿತ್ತೋರ್‌ನ ಮಾಜಿ ಮೇಯರ್ ಕಟಾರಿ ಅನುರಾಧ ಮತ್ತು ಅವರ ಪತಿ ಕಟಾರಿ ಮೋಹನ್ ಅವರನ್ನು ಹತ್ಯೆಗೈದ ಐದು ಜನರಿಗೆ ಆಂಧ್ರಪ್ರದೇಶದ ನ್ಯಾಯಾಲಯ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿದೆ. 2015 ರ ನವೆಂಬರ್ 17 ರಂದು ಚಿತ್ತೂರು ನಗರಸಭೆ ಕಚೇರಿಯೊಳಗೆ ದಂಪತಿಯನ್ನು ಕೊಲೆ ಮಾಡಲಾಗಿತ್ತು. ಪ್ರಧಾನ ಆರೋಪಿಯನ್ನು ಮೋಹನ್ ಅವರ ಸೋದರಳಿಯ, ಶ್ರೀರಾಮ್ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಆತನ ಜೊತೆ ಗೋವಿಂದ ಸ್ವಾಮಿ ಶ್ರೀನಿವಾಸಯ್ಯ ವೆಂಕಟಾಚಲಪತಿ, ಅಲಿಯಾಸ್ ವೆಂಕಟೇಶ್ ಜೊತೆಗೆ ತಪ್ಪಿತಸ್ಥರೆಂದು ಘೋಷಿಸಲಾಗಿದೆ.
ಬುರ್ಖಾ ವೇಷ ಧರಿಸಿ ಬಂದ ಅವರು ದಂಪತಿಗಳ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದರು. ನಂತರ ಕಟಾರಿ ಅನುರಾಧಾ ಅವರ ಕೊಠಡಿಯಲ್ಲಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದರು. ತೀರ್ಪಿಗೆ ಮುಂಚಿತವಾಗಿ ಪೊಲೀಸರು ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದರು. ಅವರು ನ್ಯಾಯಾಲಯದ ಸಿಬ್ಬಂದಿಗೆ ಮಾತ್ರ ಆವರಣದೊಳಗೆ ಅವಕಾಶ ನೀಡಿದ್ದರು. ಇಡೀ ಚಿತ್ತೂರಿನಲ್ಲಿ ಸಭೆ ಸಮಾರಂಭ ಹಾಗೂ ರ್ಯಾಲಿಗಳಿಗೆ ಅನುಮತಿ ನೀಡಿರಲಿಲ್ಲ.
ಪ್ರತ್ಯೇಕ ಘಟನೆಯಲ್ಲಿ, ನೆಲಮಂಗಲ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ನೆಲಮಂಗಲದ ಇಸ್ಲಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯರ ಸಲೀಂ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಸಲಿಂ ಮೇಲೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡ ಸಲೀಂನನ್ನು ನೆಲಮಂಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನೆಲಮಂಗಲ ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಎಸ್ಕೇಪ್ ಆಗಿರುವ ಅಪರಿಚಿತರ ಹುಡುಕಾಟ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಪರಿಚಿತರ ಸುಳಿವು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇತ್ತ ಆಸ್ಪತ್ರೆಗೆ ಭೇಟಿ ನೀಡಿರುವ ಪೊಲೀಸರ ತಂಡ, ಸಲೀಂ ಬಳಿಯಿಂದ ಮಾಹಿತಿ ಪಡೆದುಕೊಂಡಿದೆ.

 


