K-SET ಪರೀಕ್ಷೆಯ ವೇಳೆ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ KEA ಸಿಬ್ಬಂದಿ- ಭುಗಿಲೆದ್ದ ಆಕ್ರೋಶ

ಬಳ್ಳಾರಿ: 

    ಕೆಲವು ತಿಂಗಳ ಹಿಂದೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ  ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆಯುವಂತೆ ನೀಟ್‌ ಪರೀಕ್ಷಾ ಕೇಂದ್ರದ ಇಬ್ಬರು ಸಿಬ್ಬಂದಿ ಒತ್ತಾಯಿಸಿದ ಪ್ರಕರಣ ರಾಜ್ಯವ್ಯಾಪಿ ಸುದ್ದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿಯನ್ನೂ ಅರೆಸ್ಟ್‌ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆ ರಾಜ್ಯಾದ್ಯಂತ ನಡೆದ ಕೆ-ಸೆಟ್ ಪರೀಕ್ಷೆ ವೇಳೆಯೂ ಇಂತಹದ್ದೇ ಒಂದು ಎಡವಟ್ಟು ನಡೆದಿರುವುದು ವರದಿಯಾಗಿದೆ. ಈ ಪರೀಕ್ಷೆಯ ಸಂದರ್ಭದಲ್ಲಿ ಕೆಇಎ ಮತ್ತೊಂದು ಯಡವಟ್ಟು ಮಾಡಿದೆ. ಪರೀಕ್ಷೆಗೆ ಹಾಜರಾದಂತ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿಯನ್ನೇ ಸಿಬ್ಬಂದಿಗಳು ಬಿಚ್ಚಿಸಿರುವುದಾಗಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆಕ್ರೋಶ ಭುಗಿಲೆದ್ದಿದೆ.

   ನಿನ್ನೆ ರಾಜ್ಯದ 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆಯನ್ನು ಅಭ್ಯರ್ಥಿಗಳು ಬರೆದಿದ್ದಾರೆ. ಒಟ್ಟು 33 ವಿಷಯಗಳಿಗೆ ನಡೆಯದಂತ ಕೆ-ಸೆಟ್ ಪರೀಕ್ಷೆಗೆ 1.36 ಲಕ್ಷ ಮಂದಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಬೆಂಗಳೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ವಿಜಯಪುರದ 316 ಕೇಂದ್ರಗಳಲ್ಲಿ ನಿನ್ನೆ ಕೆ-ಸೆಟ್ ಪರೀಕ್ಷೆ ನಡೆಯಿತು.ಬಳ್ಳಾರಿಯಲ್ಲಿ ಪರೀಕ್ಷಾ ಕೇಂದ್ರವೊಂದರಲ್ಲಿ ಕೆ-ಸೆಟ್ ಪರೀಕ್ಷೆಗೆ ಹಾಜರಾದಂತ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ, ಕೈಕಡಗ ಸೇರಿದಂತೆ ಮೈಮೇಲೆ ಹಾಕಿಕೊಂಡಿರೋ ದೇವರ ದಾರವನ್ನು ಬಿಡದೇ ಬಿಚ್ಚಿಸಿರುವುದಾಗಿ ತಿಳಿದು ಬಂದಿದೆ.

   ಕೆ-ಸೆಟ್ ಪರೀಕ್ಷೆಯ ವೇಳೆಯಲ್ಲಿ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ ಹಾಗೂ ದೇವರ ದಾರ ಬಿಚ್ಚಿಸಿದ್ದರಿಂದ ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಬಳಿಯಲ್ಲೇ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದರ ನಡುವೆಯೂ ಪರೀಕ್ಷೆ ಬರೆದರು. ಪರೀಕ್ಷೆ ಬರೆದು ಹೊರ ಬಂದ ಮಹಿಳಾ ಅಭ್ಯರ್ಥಿಯೊಬ್ಬರು ಕಿವಿಯೋಲೆ, ಮೂಗುತಿ ಬಿಚ್ಚಿದ್ದು ನನ್ನ ಮನಸ್ಸಿಗೆ ನೋವಾಗಿದೆ. ಬೇಜಾರು ತಂದಿದೆ. ನಮಗೆ ಮಾಂಗಲ್ಯ, ಕಾಲುಂಗರ ಹೇಗೋ, ಹಾಗೆಯೇ ಮೂಗುತಿಯೂ ಬಹಳ ಮುಖ್ಯವಾದದ್ದು ಆಗಿದೆ. ನಿಯಮದ ಕಾರಣಕ್ಕೆ ಹೆಣ್ಣು ಮಕ್ಕಳ ಆಭರಣಗಳನ್ನು ಬಿಚ್ಚಿಸಿದ್ದು ಸರಿಯಲ್ಲ ಎಂಬುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. 

   ಕೆಲವು ತಿಂಗಳ ಹಿಂದೆ ಸಿಇಟಿ ಪರೀಕ್ಷೆ ವೇಳೆಯೂ ಇಂತಹದ್ದೇ ಒಂದು ಪ್ರಕರಣ ವರದಿಯಾಗಿತ್ತು. ಬೀದರ್, ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಜನಿವಾರವನ್ನು ಬಲವಂತದಿಂದ ತೆಗೆಸಲಾಗಿತ್ತು. ಇದನ್ನು ವಿರೋಧಿಸಿ ಬ್ರಾಹ್ಮಣ ಮಹಾಸಭಾ ಪ್ರತಿಭಟನೆ ನಡೆಸಿದ್ದಲ್ಲದೆ, ಕೋರ್ಟ್‌ಗೂ ಹೋಗಿತ್ತು. ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿತ್ತು. ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿತ್ತು.

Recent Articles

spot_img

Related Stories

Share via
Copy link