ಕುಡಿದ ಮತ್ತಿನಲ್ಲಿ ಟ್ರಕ್ ಚಾಲನೆ; 5 ಕಿ.ಮೀ ರಸ್ತೆಯುದ್ದಕ್ಕೂ ಸರಣಿ ಅಪಘಾತ, 19 ಮಂದಿ ಸಾವು

ಜೈಪುರ: 

   ರಾಜಸ್ಥಾನದ  ಜೈಪುರದಲ್ಲಿ  ಭೀಕರ ಅಪಘಾತವೊಂದು ನಡೆದಿದ್ದು, ಮದ್ಯದ ಅಮಲಿನಲ್ಲಿ ಡಂಪರ್ ಟ್ರಕ್ ಚಾಲಕನೊಬ್ಬ ಐದು  ಕಿಲೋಮೀಟರ್ ರೋಡ್‌ನಾದ್ಯಂತ ವಾಹನಗಳಿಗೆ ಡಿಕ್ಕಿ ಹೊಡೆಸಿದ್ದಾನೆ. ಭೀಕರ ಅಪಘಾತದಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದು, ಸುಮಾರು 50 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೋಹಮಂಡಿ ರಸ್ತೆಯಲ್ಲಿ ವೇಗವಾಗಿ ಬಂದ ಟ್ರಕ್ ನಿಯಂತ್ರಣ ಕಳೆದುಕೊಂಡು, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರುಗಳು ಮತ್ತು ಮೋಟಾರ್ ಸೈಕಲ್‌ಗಳು ಸೇರಿದಂತೆ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ.

   ಚಾಲಕ ಕುಡಿದ ಮತ್ತಿನಲ್ಲಿ ಟ್ರಕ್‌ ಚಲಾಯಿಸಿದ್ದಾನೆ. ಸರಣಿ ಅಪಘಾತದ ಬಳಿಕವೂ ಆತ ವಾಹನವನ್ನು ಚಲಾಯಿಸುತ್ತಲೇ ಇದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಭೀಕರ ಅಪಘಾತದಲ್ಲಿ ಹಲವಾರು ವಾಹನಗಳು ಜಖಂಗೊಂಡ ನಂತರ ಆತ ಟ್ರಕ್‌ ನಿಲ್ಲಿಸಿದ್ದಾನೆ. ತಕ್ಷಣ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡಗಳು ಮತ್ತು ಸ್ಥಳೀಯ ಪೊಲೀಸರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ.

   ಪೊಲೀಸರು ಟ್ರಕ್‌ ಚಾಲಕನನ್ನು ಬಂಧಿಸಿದ್ದಾರೆ. ಮದ್ಯ ಸೇವನೆ ಮಾಡಿರುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಟ್ರಕ್ ಪಲ್ಟಿಯಾದ ನಂತರ ಅಲ್ಲೇ ಇದ್ದವರು ಚಾಲಕನನ್ನು ಹಿಡಿದರು. ಪೊಲೀಸ್ ತಂಡವು ಜನಸಂದಣಿಯಿಂದ ಚಾಲಕನನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿತು. ಜೈಪುರದಿಂದ ಸುಮಾರು 400 ಕಿ.ಮೀ ದೂರದಲ್ಲಿ ಭಾರತ್ ಮಾಲಾ ಹೆದ್ದಾರಿಯ ಮಾತೋಡಾ ಗ್ರಾಮದ ಬಳಿ, ಟೆಂಪೋ ಟ್ರಾವೆಲರ್ ಬಸ್ ನಿಲ್ಲಿಸಿದ್ದ ಟ್ರೇಲರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ನಡೆದ ಕೆಲವೇ ಗಂಟೆಗಳ ನಂತರ ಈ ಅಪಘಾತ ಸಂಭವಿಸಿದೆ .

   ಬಿಕಾನೇರ್‌ನ ಕೊಲಾಯತ್‌ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತರು ಜೋಧ್‌ಪುರದ ಸೂರ್‌ಸಾಗರ್‌ನಿಂದ ಹಿಂದಿರುತ್ತಿದ್ದರು. ಈ ವೇಳೆ ರಾಜಧಾನಿ ಜೈಪುರದಿಂದ ಸುಮಾರು 400 ಕಿಮೀ ದೂರದಲ್ಲಿರುವ ಫಲೋಡಿ ಜಿಲ್ಲೆಯಲ್ಲಿ ಭೀಕರ ಅಪಘಾತ ನಡೆದಿದೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ದುಃಖ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಗಾಯಾಳುಗಳಿಗೆ ಸರಿಯಾದ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 

   ಬಸ್ಸಿನ ಮುಂಭಾಗ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸ್ಥಳೀಯ ಮಟ್ಟದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು, ನಂತರ ಗಂಭೀರವಾಗಿ ಗಾಯಗೊಂಡವರನ್ನು ಜೋಧ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ಮಾತೋಡಾ ಪೊಲೀಸ್ ಠಾಣಾಧಿಕಾರಿ ಅಮನಾರಾಮ್ ದೃಢಪಡಿಸಿದರು. 

   ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಇಂದು (ಸೋಮವಾರ) ಭೀಕರ ಅಪಘಾತ ಸಂಭವಿಸಿದೆ. ಜಲ್ಲಿ ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 20 ಜನರು ಮೃತಪಟ್ಟಿದ್ದು, 8 ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

Recent Articles

spot_img

Related Stories

Share via
Copy link