ಕೊಯಮತ್ತೂರು:
ನಿನ್ನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪ ಹೊತ್ತ ಮೂವರು ದುಷ್ಕರ್ಮಿಗಳು ಪರಾರಿಯಾಗಲು ಯತ್ನಿಸಿದಲ್ಲದೆ, ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರು ನಗರದ ವಿಮಾನ ನಿಲ್ದಾಣದ ಬಳಿ ಈ ಆಘಾತಕಾರಿ ಘಟನೆ ನಡೆದಿದೆ.
ಸೋಮವಾರ, ವಿಶೇಷ ಪೊಲೀಸ್ ತಂಡಗಳು ದೇವಸ್ಥಾನದ ಬಳಿ ತವಾಸಿ, ಕರುಪ್ಪಸ್ವಾಮಿ ಮತ್ತು ಕಾಳೀಶ್ವರನ್ ಎಂದು ಗುರುತಿಸಲಾದ ಆರೋಪಿಗಳನ್ನು ಸುತ್ತುವರೆದರು. ಈ ವೇಳೆ ಆರೋಪಿಗಳು, ಅಧಿಕಾರಿಗಳ ಮೇಲೆ ಕುಡುಗೋಲುಗಳಿಂದ ಹಲ್ಲೆ ನಡೆಸಿದರು. ಇದರಿಂದ ಹೆಡ್‍ಕಾನ್ಸ್ಟೇಬಲ್ ಚಂದ್ರಶೇಖರ್ ಅವರ ಎಡ ಮಣಿಕಟ್ಟು ಮತ್ತು ತೋಳಿನ ಮೇಲೆ ಗಾಯವಾಗಿದೆ. ಆರೋಪಿಗಳು ಹಲ್ಲೆ ನಡೆಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಅವರ ಮೇಲೆ ಫೈರಿಂಗ್ ಮಾಡಿದ್ದಾರೆ.
ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಗುಂಡೇಟಿನಿಂದ ಗಾಯಗೊಂಡ ಅವರನ್ನು ಕೊಯಮತ್ತೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಗೊಂಡ ಅಧಿಕಾರಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಆರೋಪಿಗಳು ಶಿವಗಂಗೈ ಜಿಲ್ಲೆಯವರಾಗಿದ್ದು, ಕೊಯಮತ್ತೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ಉದ್ಯೋಗದಲ್ಲಿದ್ದರು. ಕರುಪ್ಪಸ್ವಾಮಿ ಮತ್ತು ಕಾಳೀಶ್ವರನ್ ಸಂಬಂಧಿಕರು ಎಂದು ಹೇಳಲಾಗಿದ್ದು, ಮೂವರ ವಿರುದ್ಧವೂ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ.
ಭಾನುವಾರ ರಾತ್ರಿ ಕಾರಿನಲ್ಲಿ ಹೊರಟಿದ್ದ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತೆಯ ಬಳಿಗೆ ಆರೋಪಿಗಳು ಬಂದಾಗ ಈ ಘಟನೆ ನಡೆದಿದ್ದು, ಆಕೆಯ ಸ್ನೇಹಿತೆಯ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ಅಪಹರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಆರೋಪಿಗಳು ಯುವತಿಯನ್ನು ವಿಮಾನ ನಿಲ್ದಾಣದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು, ಅಲ್ಲಿ ಅವರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ತಮಿಳುನಾಡಿನಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿದ್ದು, ವ್ಯಾಪಕ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ. ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರವು ಮಹಿಳೆಯರ ಸುರಕ್ಷತೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಖಂಡಿಸಿದರು. ಹಿಂದಿನ ಎಐಎಡಿಎಂಕೆ ಆಡಳಿತದಲ್ಲಿ, ತಮಿಳುನಾಡು ಮಹಿಳೆಯರು ಸುರಕ್ಷಿತವಾಗಿ ವಾಸಿಸುವ ಭಾರತದ ಪ್ರಮುಖ ರಾಜ್ಯವಾಗಿತ್ತು ಎಂದು ಅವರು ಹೇಳಿದರು.
ತಮಿಳುನಾಡಿನಲ್ಲಿ ಮಹಿಳೆಯರ ಮೇಲಿನ ಘೋರ ಅಪರಾಧಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂಬುದಕ್ಕೆ ಈ ಭಯಾನಕ ಘಟನೆ ಒಂದು ಉದಾಹರಣೆಯಾಗಿದೆ ಎಂದು ಕೇಂದ್ರ ಸಚಿವ ಎಲ್. ಮುರುಗನ್ ಕಿಡಿಕಾರಿದ್ದಾರೆ. ಬಿಜೆಪಿ ರಾಜ್ಯ ಮುಖ್ಯಸ್ಥ ನೈನಾರ್ ನಾಗೇಂದ್ರನ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರೆ, ಕೊಯಮತ್ತೂರು ದಕ್ಷಿಣ ಶಾಸಕಿ ಮತ್ತು ಪಕ್ಷದ ಮಹಿಳಾ ಮೋರ್ಚಾ ಅಧ್ಯಕ್ಷೆ ವನತಿ ಶ್ರೀನಿವಾಸನ್ ಈ ಘಟನೆ ಆಡಳಿತಾರೂಢ ಡಿಎಂಕೆ ಮೇಲೆ ಮತ್ತೊಂದು ಕಪ್ಪು ಚುಕ್ಕೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಾಗಿನಿಂದ, ಇಂತಹ ಘಟನೆಗಳು ಸಮಾಜ ವಿರೋಧಿ ಶಕ್ತಿಗಳು ಇನ್ನು ಮುಂದೆ ಕಾನೂನು ಅಥವಾ ಪೊಲೀಸರಿಗೆ ಹೆದರುವುದಿಲ್ಲ ಎಂಬುದನ್ನು ತೋರಿಸಿವೆ ಎಂದು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಹೇಳಿದ್ದಾರೆ.








