ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಆಯ್ಕೆ

ನ್ಯೂಯಾರ್ಕ್: 

    ಮೇಯರ್ ಚುನಾಣಾ   ಕಣದಲ್ಲಿದ್ದ ಮಾಜಿ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್   ಬೆಂಬಲಿಸಿದ ಬಳಿಕ ಸಾಕಷ್ಟು ಕುತೂಹಲ ಕೆರಳಿಸಿದ್ದ ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ಮೊದಲ ಮುಸ್ಲಿಂ ಅಭ್ಯರ್ಥಿ  ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ  ಆಯ್ಕೆಯಾಗಿದ್ದಾರೆ. ಇವರು ನ್ಯೂಯಾರ್ಕ್‌ಗೆ ಆಯ್ಕೆಯಾದ ಅತ್ಯಂತ ಕಿರಿಯ ಮೇಯರ್ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ. 34 ವರ್ಷದ ಡೆಮಾಕ್ರಟಿಕ್ ಸಮಾಜವಾದಿ ಮಮ್ದಾನಿ ಅವರು ಶೇಕಡಾ 50ರಷ್ಟು ಮತಗಳೊಂದಿಗೆ ಜಯ ಸಾಧಿಸಿದ್ದಾರೆ.

    ಶತಮಾನಗಳ ಇತಿಹಾಸವಿರುವ ನ್ಯೂಯಾರ್ಕ್ ಮೇಯರ್ ಸ್ಥಾನದಲ್ಲಿ ಅತ್ಯಂತ ಕಿರಿಯ ಮೇಯರ್ ಆಗಿ ಗುರುತಿಸಿಕೊಂಡ ಜೋಹ್ರಾನ್ ಮಮ್ದಾನಿ ಅವರು ಮಂಗಳವಾರ ಗೆಲುವಿನ ದಾಖಲೆಯೊಂದಿಗೆ ಇತಿಹಾಸ ನಿರ್ಮಿಸಿದರು. ಇವರು ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಮೊದಲ ಮುಸ್ಲಿಂ ಮತ್ತು ದಕ್ಷಿಣ ಏಷ್ಯಾದವರೆಂದು ಕೂಡ ಗುರುತಿಸಿಕೊಂಡಿದ್ದಾರೆ. 

    ಮಮ್ದಾನಿಯನ್ನು ಮೇಯರ್ ಆಗಿ ಆಯ್ಕೆ ಮಾಡಿರುವ ಅಸೋಸಿಯೇಟೆಡ್ ಪ್ರೆಸ್, ಶೇ. 80ರಷ್ಟು ಮತಗಳಲ್ಲಿ ಮಮ್ದಾನಿ ಅವರು ಶೇ. 50.3ರಷ್ಟು ಮತ ಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಆಂಡ್ರ್ಯೂ ಕ್ಯುಮೊ ಅವರು ಶೇ. 41.6ರಷ್ಟು ಮತಗಳಿಸಿ ಹಿನ್ನಡೆ ಅನುಭವಿಸಿದ್ದಾರೆ. ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸಿಲ್ವಾ ಅವರು ಶೇ. 7.2ರಷ್ಟು ಮತಗಳೊಂದಿಗೆ ಭಾರಿ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ ಎಂದು ತಿಳಿಸಿದೆ. 

     ವಿಶ್ವ ಪ್ರಸಿದ್ಧ ಭಾರತೀಯ- ಅಮೆರಿಕನ್ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಮಹಮೂದ್ ಮಮ್ದಾನಿ ದಂಪತಿಯ ಮಗನಾದ ಜೋಹ್ರಾನ್ ಮಮ್ದಾನಿ ಅವರು ಉಗಾಂಡಾದ ಕಂಪಾಲಾದಲ್ಲಿ ಜನಿಸಿದ್ದರು. ಏಳನೇ ವಯಸ್ಸಿನಲ್ಲಿ ತಂದೆ, ತಾಯಿಯೊಂದಿಗೆ ನ್ಯೂಯಾರ್ಕ್ ನಗರಕ್ಕೆ ತೆರಳಿ ಅಲ್ಲೇ ವಾಸಿಸಲು ಪ್ರಾರಂಭಿಸಿದರು. ಬಳಿಕ ಅಲ್ಲಿಯ ನಾಗರಿಕರಾದರು.

    ಸಿರಿಯನ್- ಅಮೆರಿಕನ್ ಕಲಾವಿದ ರಾಮ ದುವಾಜಿ ಅವರನ್ನು ವಿವಾಹವಾಗಿರುವ ಮಮ್ದಾನಿ ಅವರು ಮೊದಲ ಬಾರಿಗೆ 2020 ರಲ್ಲಿ ಕ್ವೀನ್ಸ್‌ನ ಜಿಲ್ಲೆಯನ್ನು ಪ್ರತಿನಿಧಿಸುವ ಮೂಲಕ ನ್ಯೂಯಾರ್ಕ್ ಅಸೆಂಬ್ಲಿಗೆ ಆಯ್ಕೆಯಾದ್ದರು. ಇವರ ಅವಧಿಯಲ್ಲೇ ನಗರ ಬಸ್‌ಗಳನ್ನು ಪ್ರಯಾಣಿಕರಿಗೆ ಉಚಿತಗೊಳಿಸುವ ಪೈಲಟ್ ಕಾರ್ಯಕ್ರಮ ಜಾರಿಗೊಂಡಿತ್ತು.

   ಮೇಯರ್ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ಮಮ್ದಾನಿ ಅವರು ಉಚಿತ ಮಕ್ಕಳ ಆರೈಕೆ, ಉಚಿತ ಬಸ್‌ಗಳು, ಬಾಡಿಗೆ ನಿಯಂತ್ರಿತ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಜನರಿಗೆ ಬಾಡಿಗೆ ಫ್ರೀಜ್, ಕೈಗೆಟುಕುವ ದರದಲ್ಲಿ ವಸತಿ ಮತ್ತು ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸುವ ಭರವಸೆಗಳನ್ನು ಜನರಿಗೆ ನೀಡಿದ್ದಾರೆ. 

  ಈಗಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಹಿರಂಗವಾಗಿಯೇ ಮಮ್ದಾನಿ ಅವರು ಮೇಯರ್ ಆಗಿ ಆಯ್ಕೆಯಾದರೆ ತಾನು ಹೆಚ್ಚಿನ ಅನುದಾನವನ್ನು ನ್ಯೂಯಾರ್ಕ್ ನಗರಕ್ಕೆ ಕೊಡುವುದಿಲ್ಲ ಎಂದು ಘೋಷಿಸಿದ್ದಾರೆ. ಹೀಗಾಗಿ ಮಮ್ದಾನಿ ಅವರ ಮುಂದೆ ಇನ್ನು ಸಾಕಷ್ಟು ಸವಾಲುಗಳಿವೆ. ಇದನ್ನೆಲ್ಲ ಅವರು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Recent Articles

spot_img

Related Stories

Share via
Copy link