ಬೆಂಗಳೂರು
ರಾಜ್ಯದಲ್ಲಿ ಸರಕಾರಿ ಜಾಗಗಳಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಪರೋಕ್ಷವಾಗಿ ತಡೆಯಾಗುವಂತೆ ರಾಜ್ಯ ಸರಕಾರ ನೀಡಿದ್ದ ಆದೇಶಕ್ಕೆ ಮತ್ತೆ ಹಿನ್ನಡೆಯಾಗಿದೆ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಗೆ ನಿರ್ಬಂಧ ಹಾಗೂ ಅನುಮತಿ ಕಡ್ಡಾಯ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ಇದೀಗ, ಆ ತಡೆಯಾಜ್ಞೆಯ ತೆರವು ಕೋರಿ ಸರಕಾರ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ತಳ್ಳಿಹಾಕಿದೆ.
ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಸರ್ಕಾರದ ಪರವಾಗಿ ಸಲ್ಲಿಕೆಯಾದ ಮೇಲ್ಮನವಿ ಅರ್ಜಿಯ ವಿಚಾರಣೆ ಹೈಕೋರ್ಟ್ ಧಾರವಾಡದ ವಿಭಾಗೀಯ ಪೀಠದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆಯ ಚಟುವಟಿಕೆಗಳಿಗೆ ಪರೋಕ್ಷ ನಿಷೇಧ ಹೇರುವ ಉದ್ದೇಶದಿಂದ ಈ ನಿರ್ಬಂಧ ವಿಧಿಸಲಾಗಿತ್ತು. 10 ಜನಕ್ಕಿಂತ ಹೆಚ್ಚು ಜನರು ಸೇರಿಕೊಂಡರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸುವ ಅಧಿಸೂಚನೆ ನಾಗರಿಕರ ಹಕ್ಕಿಗೆ ಧಕ್ಕೆ ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು. ಈ ಆದೇಶಕ್ಕೆ ಏಕ ಸದಸ್ಯ ಪೀಠ ತಡೆಯಾಜ್ಞೆ ತಂದಿತ್ತು.
ಬಳಿಕ ಸರ್ಕಾರ ತಡೆಯಾಜ್ಞೆ ತೆರವು ಕೋರಿ ಅರ್ಜಿ ಸಲ್ಲಿಸಿತ್ತು. ಇಂದು ಧಾರವಾಡ ಹೈಕೋರ್ಟ್ ದ್ವಿಸದಸ್ಯತ್ವ ಪೀಠದಿಂದ ಆದೇಶ ಹೊರಬಿದ್ದಿದ್ದು, ಸರ್ಕಾರದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಅಕ್ಟೋಬರ್ 28ರಂದು ಹೈಕೋರ್ಟ್ ಏಕ ಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರದ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ನವೆಂಬರ್ 4ರಂದು ನಡೆದಿದ್ದ ಅರ್ಜಿಯ ವಿಚಾರಣೆ ವಾದ ಪ್ರತಿವಾದ ಆಲಿಸಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಇಂದು ಹೈಕೋರ್ಟ್ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ನಕಾರ ವ್ಯಕ್ತಪಡಿಸಿದೆ. ತಡೆ ತೆರವಿಗೆ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿತು.
ಪಾರ್ಕ್, ಮೈದಾನ ಎಲ್ಲವೂ ಸರ್ಕಾರದ ಸ್ವತ್ತೆಂದು ಭಾವಿಸಬಾರದು. ಮೈದಾನದಲ್ಲಿ ಕ್ರಿಕೆಟ್ ಆಡಲೂ ಅನುಮತಿ ಬೇಕೆಂಬಂತೆ ನಿಯಮ ತರಲಾಗಿದೆ. ಪೊಲೀಸ್ ಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳುವ ಅಧಿಕಾರ ಜಿಲ್ಲಾ ದಂಡಾಧಿಕಾರಿಗೆ ಮಾತ್ರವಿದೆ. ಏಕಸದಸ್ಯ ಪೀಠದಲ್ಲೇ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಬಹುದಿತ್ತು, ಮೇಲ್ಮನವಿಗೆ ಅಷ್ಟೇ ಸರ್ಕಾರ ಬಂದುಕೊಂಡಿದೆ ಎಂದು ಪ್ರತಿವಾದಿ ಪುನಶ್ಚೇತನ ಸೇವಾ ಸಂಸ್ಥೆ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದಿಸಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶವನ್ನು ಈ ಸರ್ಕಾರ ಬಿಗಿ ಮಾಡಿತ್ತು. ಇದರ ಹಿಂದೆ ಆರೆಸ್ಸೆಸ್ನ ನೂರು ವರ್ಷಗಳ ಪಥಸಂಚಲನ ಮತ್ತಿತರ ಕಾರ್ಯಕ್ರಮಗಳ ನಿರ್ಬಂಧ ಉದ್ದೇಶ ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಪುನಶ್ಚೇತನ ಸೇವಾ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ, ಸರ್ಕಾರದ ಆದೇಶಕ್ಕೆ ಅಕ್ಟೋಬರ್ 28 ರಂದು ಮಧ್ಯಂತರ ತಡೆಯಾಜ್ಞೆ ನೀಡಿ ತೀರ್ಪು ಪ್ರಕಟಿಸಿತ್ತು.








