ವಿಶೇಷ ಭದ್ರತೆಗೆ ʼಕೊರಗಜ್ಜʼ ಚಿತ್ರತಂಡ ಮನವಿ; ಗೃಹ ಸಚಿವ ಡಾ.ಜಿ. ಪರಮೇಶ್ವರ್‌ರಿಂದ ಸಕಾರಾತ್ಮಕ ಸ್ಪಂದನೆ

ಬೆಂಗಳೂರು

    ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ, ಸುಧೀರ್ ಅತ್ತಾವರ್ ನಿರ್ದೇಶನದ ʼಕೊರಗಜ್ಜʼ ಸಿನಿಮಾ  ಹುಟ್ಟಿಸುತ್ತಿರುವ ಕ್ರೇಜ್ ಅಷ್ಟಿಷ್ಟಲ್ಲ. ಚಿತ್ರದ ಧನಾತ್ಮಕ ಜನಪ್ರಿಯತೆಯ ಬಗ್ಗೆ ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಹರ್ಷ ವ್ಯಕ್ತಪಡಿಸಿ, ನಶಿಸಿ ಹೋಗುತ್ತಿರುವ ನಮ್ಮ ಪುರಾತನ ಸಂಸ್ಕ್ರತಿ ಹಾಗೂ ಕಲೆಯನ್ನು ʼಕೊರಗಜ್ಜʼ ರೀತಿಯ ಸಿನಿಮಾಗಳು ಎತ್ತಿಹಿಡಿಯುತ್ತಿರುವುದು ಸಂತೋಷ ನೀಡುತ್ತಿದೆ. ಈ ರೀತಿಯ ಚಿತ್ರಗಳು ಹೆಚ್ಚು ಹೆಚ್ಚು ಮೂಡಿಬರಲಿ ಎಂದು ಆಶಿಸಿ, ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ ತಯಾರಾಗಿರುವ ʼಕೊರಗಜ್ಜʼ ಚಿತ್ರಕ್ಕೆ ಶುಭ ಹಾರೈಸಿದರು.

    ಇದೇ ತಿಂಗಳ 11ರಂದು ಮಂಗಳೂರಿನಲ್ಲಿ ನಡೆಯಲಿರುವ ಅಖಿಲಭಾರತ ಮಟ್ಟದ ʼಕೊರಗಜ್ಜʼ ಚಿತ್ರದ ಪತ್ರಿಕಾಗೋಷ್ಠಿ ಹಾಗೂ ಅಂದೇ ಸಂಜೆ ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಲಿರುವ ಪತ್ರಕರ್ತರ ಮತ್ತು ಸಾವಿರಾರು ಜನರ ಹಾಗೂ ಸಿನಿಮಾ ತಾರೆಯರ ಸಮ್ಮುಖದಲ್ಲಿ ನಡೆಯಲಿರುವ ಕೊರಗಜ್ಜ ದೈವದ ಅದ್ದೂರಿ ಕೋಲಸೇವೆಯ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರೊಂದಿಗೆ ಚಿತ್ರತಂಡ ಚರ್ಚಿಸಿತು.

    ಕೆಲ ಸ್ಥಳಿಯ ಕಿಡಿಕೇಡಿಗಳು ನೀಡುತ್ತಿರುವ ಬೆದರಿಕೆ ಮತ್ತು ಚಿತ್ರೀಕರಣದ ವೇಳೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರೊಂದಿಗೆ ನಿರ್ದೇಶಕ ಸುಧೀರ್ ಅತ್ತಾವರ್, ಚಿತ್ರದ ಪ್ರಮುಖ ನಟಿ ಭವ್ಯ, ನಿರ್ಮಾಪಕ ತ್ರಿವಿಕ್ರಮ್, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಚರ್ಚಿಸಿ ವಿಶೇಷ ಭದ್ರತೆಯ ಬಗ್ಗೆ ಮನವಿ ಮಾಡಿಕೊಂಡರು. ಗೃಹ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿ, ಮಂಗಳೂರಿನ ಪೊಲೀಸ್ ಕಮಿಷನರ್ ಜತೆ ವಿಷಯ ಪ್ರಸ್ತಾಪಿಸಿದರು ಎಂದು ಅವರು ತಿಳಿಸಿದ್ದಾರೆ.

   ಇತ್ತೀಚೆಗಷ್ಟೇ ಅತ್ಯಂತ ವಿಭಿನ್ನ ರೀತಿಯಲ್ಲಿ ಚಿತ್ರದ ಫಸ್ಟ್ ಲುಕ್ ಮತ್ತು 3ಡಿ ಮೋಷನ್ ಪೋಸ್ಟರ್ ಬಿಡುಗಡೆ ಗೊಳಿಸಿ ಚಿತ್ರದ ಮೇಲಿನ ನಿರೀಕ್ಷೆ ಇಮ್ಮಡಿಗೊಳಿಸಿದ್ದ ಚಿತ್ರತಂಡ, ದೇಶಾದ್ಯಂತ ಪತ್ರಕರ್ತರನ್ನು ಒಟ್ಟುಗೂಡಿಸಿ, ಚಿತ್ರದ ಟ್ರೇಲರ್ ಅಥವಾ ಆಡಿಯೋ ಲಾಂಚ್ ಮಾಡುವ ಪ್ಲಾನ್ ಮಾಡಬಹುದೇ ಎನ್ನುವ ಸಂದೇಹ ಜೋರಾಗಿ ಕೇಳಿಬರುತ್ತಿದೆ.

Recent Articles

spot_img

Related Stories

Share via
Copy link