ಶಾಲಾ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಸ್ಫೋಟ; 54 ಜನರಿಗೆ ಗಾಯ

ಜಕಾರ್ತ: 

     ಇಂಡೋನೇಷ್ಯಾದ  ಜಕಾರ್ತದಯಲ್ಲಿರುವ ಪ್ರೌಢಶಾಲೆಯೊಂದರ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ಸಮಯದಲ್ಲಿ  ಸರಣಿ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಕನಿಷ್ಠ 54 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಉತ್ತರ ಜಕಾರ್ತಾದ ಕೆಲಪಾ ಗೇಡಿಂಗ್ ಪ್ರದೇಶದ ನೌಕಾಪಡೆಯ ಕಾಂಪೌಂಡ್‌ನಲ್ಲಿರುವ ರಾಜ್ಯ ಪ್ರೌಢಶಾಲೆಯಾದ ಎಸ್‌ಎಂಎ 27 ರಲ್ಲಿ ಮಧ್ಯಾಹ್ನದ ಸುಮಾರಿಗೆ ಈ ಘಟನೆ ನಡೆದಿದೆ. ಪ್ರವಚನ ಆರಂಭವಾದ ಕೂಡಲೇ ಎರಡು ದೊಡ್ಡ ಸ್ಫೋಟಗಳು ಕೇಳಿಬಂದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

     ದಟ್ಟವಾದ ಬೂದು ಹೊಗೆ ತುಂಬಿದಾಗ ಜನರು ಅಲ್ಲಿಂದ ಏಕಾ ಏಕಿ ಓಡಲು ಪ್ರಾರಂಭಿಸಿದರು. ಜಕಾರ್ತಾ ಪೊಲೀಸ್ ಮುಖ್ಯಸ್ಥ ಅಸೆಪ್ ಎಡಿ ಸುಹೇರಿ ಅವರ ಪ್ರಕಾರ, ಹೆಚ್ಚಿನ ಗಾಜು ಮತ್ತು ಅವಶೇಷಗಳಿಂದ ಗಾಯಗೊಂಡಿದ್ದಾರೆ. ಹಲವರಿಗೆ ಚಿಕಿತ್ಸೆ ನೀಡಿ ಹತ್ತಿರದ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದರೂ, ಸುಮಾರು 20 ವಿದ್ಯಾರ್ಥಿಗಳು ಇನ್ನೂ ವೈದ್ಯಕೀಯ ಆರೈಕೆ ಪಡೆಯುತ್ತಿದ್ದಾರೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

     ಸ್ಫೋಟದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದಾಗ್ಯೂ, ಆರಂಭಿಕ ವರದಿಗಳು ಮಸೀದಿಯ ಧ್ವನಿವರ್ಧಕ ವ್ಯವಸ್ಥೆಯ ಬಳಿಯ ಪ್ರದೇಶದಿಂದ ಸ್ಫೋಟಗಳು ಸಂಭವಿಸಿವೆ ಎಂದು ಸೂಚಿಸುತ್ತವೆ. ನಂತರ ಸ್ಥಳಕ್ಕೆ ಕಳುಹಿಸಲಾದ ಬಾಂಬ್ ವಿರೋಧಿ ದಳವು ಘಟನಾ ಸ್ಥಳದ ಬಳಿ ರೈಫಲ್‌ಗಳು ಮತ್ತು ಗನ್ ಅನ್ನು ಪತ್ತೆ ಮಾಡಿವೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಮಸೀದಿ ಸುತ್ತ ಮುತ್ತಲು ಶೋಧ ಕಾರ್ಯ ನಡೆಸಲಾಗುತ್ತಿದೆ. 

    ಕಳೆದ ವಾರ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ನೆಲಮಾಳಿಗೆಯಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಹವಾನಿಯಂತ್ರಣ ವ್ಯವಸ್ಥೆಯ ದುರಸ್ತಿ ಕಾರ್ಯದ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಹಠಾತ್ ಸ್ಫೋಟದಿಂದ ಸುಪ್ರೀಂ ಕೋರ್ಟ್‌ನ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನೆಲಮಾಳಿಗೆಯಲ್ಲಿರುವ ಹವಾನಿಯಂತ್ರಣ ಸ್ಥಾವರದ ಬಳಿ ನಿರ್ವಹಣಾ ಕೆಲಸ ಮಾಡುತ್ತಿದ್ದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

     ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಸ್ಫೋಟ ನಡೆದ ಸ್ಥಳದ ಬಳಿಯ ನೆಲಮಾಳಿಗೆಯಲ್ಲಿರುವ ಕ್ಯಾಂಟೀನ್ ಅನ್ನು ಸುಪ್ರೀಂ ಕೋರ್ಟ್ ಸಿಬ್ಬಂದಿಗೆ ಮಾತ್ರ ಮೀಸಲಿಡಲಾಗಿದೆ. ಇಸ್ಲಾಮಾಬಾದ್ ಐಜಿಪಿ ಅಲಿ ನಾಸಿರ್ ರಿಜ್ವಿ ಅವರು ಸುಪ್ರೀಂ ಕೋರ್ಟ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕ್ಯಾಂಟೀನ್‌ನಲ್ಲಿ ಹಲವು ದಿನಗಳಿಂದ ಅನಿಲ ಸೋರಿಕೆಯಾಗುತ್ತಿತ್ತು, ದುರಸ್ತಿ ಕಾರ್ಯದ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಿದರು. “ತಜ್ಞರು ಇದು ಅನಿಲ ಸ್ಫೋಟ ಎಂದು ದೃಢಪಡಿಸಿದ್ದಾರೆ” ಎಂದು ಅವರು ಹೇಳಿದರು. 

     ಗಾಯಗೊಂಡ 12 ಜನರಲ್ಲಿ ಮೂವರನ್ನು ಪಿಮ್ಸ್ ಆಸ್ಪತ್ರೆಗೆ ಮತ್ತು ಉಳಿದ ಒಂಬತ್ತು ಜನರನ್ನು ಪಾಲಿಕ್ಲಿನಿಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಬ್ಬರು ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link