ಬೆಂಗಳೂರು :
ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ನಟ ದರ್ಶನ್ ಆಪ್ತ ನಟ ಧನ್ವೀರನನ್ನು ಸಿಸಿಬಿ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಜೈಲಿನ ವಿಡಿಯೋ ಹೊರಗಡೆ ಬಂದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ದರ್ಶನ್ ಆಪ್ತ ಧನ್ವೀರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಡರಾತ್ರಿ ಒಂದು ಗಂಟೆಗೆ ಮನೆಯ ಬಳಿ ಧನ್ವೀರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಹಿನ್ನೆಲೆಯಲ್ಲಿ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿರುವ ಅಕ್ರಮಗಳ ವಿಡಿಯೋ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಭೆ ನಡೆಸಿದ್ದು, ಸಭೆಯಲ್ಲಿ ಜೈಲು ಅಧಿಕಾರಿಗಳಿಗೆ ಸಚಿವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜೈಲಿನಲ್ಲಿ ಕೈದಿಗಳ ಮೋಜು ಮಸ್ತಿ ವಿಡಿಯೋದ ಬಗ್ಗೆ ಅಧಿಕಾರಿಗಳಿಗೆ ಪರಮೇಶ್ವರ್ ಅವರು ಕ್ಲಾಸ್ ತೆಗೆದುಕೊಂಡಿದ್ದು, ವಿಡಿಯೋ ಹಾಗೂ ಫೋಟೋಗಳ ಬಗ್ಗೆ ವಿವರಣೆ ಕೇಳಿದ್ದಾರೆ. ಯಾವ್ಯಾವ ವಿಡಿಯೋ ಯಾವಾಗ ತೆಗೆದಿರುವುದು ಎಂಬುದರ ಕುರಿತು ಮಾಹಿತಿಯನ್ನು ಗೃಹ ಸಚಿವರು ಸಂಗ್ರಹಿಸುತ್ತಿದ್ದಾರೆ. ಬೆಂಗಳೂರಿನ ಕಾರಾಗೃಹ ಕಚೇರಿಯಲ್ಲಿ ಈ ಸಭೆ ನಡೆಯುತ್ತಿದೆ.
ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಅಲರ್ಟ್ ಆಗಿರುವ ಜೈಲಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟು 100ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ಕೈದಿಗಳ ಬ್ಯಾರಕ್ಗಳ ಪರಿಶೀಲನೆ ಮಾಡಿದ್ದು, ಪರಿಶೀಲನೆ ವೇಳೆ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಬ್ಯಾರಕ್ಗಳಲ್ಲಿ ಸಿಬ್ಬಂದಿ ಪರಿಶೀಲನೆ ವೇಳೆ ಯಾವುದೇ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ದಾಳಿಯ ಮಾಹಿತಿ ಸೋರಿಕೆ ಆಗಿರುವ ಅನುಮಾನ ವ್ಯಕ್ತವಾಗಿದೆ.








