ಭೂತಾನ್:
ದೆಹಲಿಯ ಕೆಂಪುಕೋಟೆ ಬಳಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಒಂಭತ್ತು ಜನರು ಸಾವನ್ನಪ್ಪಿದ ನಂತರ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕಠಿಣ ಎಚ್ಚರಿಕೆ ನೀಡಿದ್ದಾರೆ. ಭೂತಾನಿನ ಥಿಂಪುವಿನಲ್ಲಿ ಮಾತನಾಡಿದ ಅವರು, ಇದರ ಹಿಂದೆ ಇರುವ ಪಿತೂರಿ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಹೊಣೆಗಾರರಾದ ಎಲ್ಲರನ್ನೂ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ನೆರೆಯ ರಾಷ್ಟ್ರ ಭೂತಾನ್‍ನಲ್ಲಿ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರ 70ನೇ ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಿಯವರು ಎರಡು ದಿನಗಳ ಭೇಟಿಗಾಗಿ ಇಂದು ಮುಂಜಾನೆ ಥಿಂಪುಗೆ ಆಗಮಿಸಿದರು.
ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ಫೋಟವನ್ನು ಭಯಾನಕ ಎಂದು ಕರೆದರು. ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಇಡೀ ರಾಷ್ಟ್ರ ಇಂದು ಅವರೊಂದಿಗೆ ನಿಂತಿದೆ. ನಿನ್ನೆ ರಾತ್ರಿಯಿಡೀ ಈ ಘಟನೆಯ ತನಿಖೆ ನಡೆಸುತ್ತಿರುವ ಎಲ್ಲಾ ಸಂಸ್ಥೆಗಳೊಂದಿಗೆ ನಾನು ಸಂಪರ್ಕದಲ್ಲಿದ್ದೆ. ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಭೇದಿಸುತ್ತವೆ ಎಂದು ಅವರು ಹೇಳಿದರು.
ಇಲ್ಲಿಯವರೆಗೆ ಹಿಂದಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ, ನಂತರ ಇಂಗ್ಲಿಷ್‌ನಲ್ಲಿ ಮಾತನಾಡಿದರು. ತಪ್ಪಿತಸ್ಥರಿಗೆ ತಕ್ಕಶಾಸ್ತಿ ಮಾಡುವುದಾಗಿ ಹೇಳಿದರು. ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ದೇಶವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಪ್ರಧಾನಿ ಮೋದಿ ಕೊನೆಯ ಬಾರಿಗೆ ಹಿಂದಿಯಿಂದ ಇಂಗ್ಲೀಷ್‍ಗೆ ಭಾಷೆಯನ್ನು ಬದಲಾಯಿಸಿದ್ದರು.
ಆ ಭಾಷಣದಲ್ಲಿ ಅವರು, ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ, ಮತ್ತು ಶಿಕ್ಷಿಸುತ್ತದೆ ಎಂದು ಹೇಳಿದ್ದರು. ನಂತರ, ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರದ ಆಪರೇಷನ್ ಸಿಂಧೂರ್ ಅನ್ನು ನಡೆಸಿತು. ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ದಾಳಿ ನಡೆಸಿತು.
ಸೋಮವಾರ ಸಂಜೆ ಕೆಂಪು ಕೋಟೆ ಬಳಿ ನಿಧಾನವಾಗಿ ಚಲಿಸುತ್ತಿದ್ದ ವಾಹನದ ಮೇಲೆ ಹೆಚ್ಚಿನ ತೀವ್ರತೆಯ ಸ್ಫೋಟ ಸಂಭವಿಸಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿ, 20 ಜನರು ಗಾಯಗೊಂಡರು. ಜನಪ್ರಿಯ ಪ್ರವಾಸಿ ತಾಣವಾದ ಆ ಪ್ರದೇಶವು ಜನರಿಂದ ತುಂಬಿ ತುಳುಕುತ್ತಿತ್ತು. ಜನದಟ್ಟಣೆಯ ಸಂಜೆಯ ಸಮಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಅಮೋನಿಯಂ ನೈಟ್ರೇಟ್ ಇಂಧನ ತೈಲವನ್ನು ಬಳಸಲಾಗಿದೆ ಎಂದು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ.
ಮೂಲಗಳ ಪ್ರಕಾರ, ಆತ್ಮಾಹುತಿ ಬಾಂಬ್ ದಾಳಿಯನ್ನು ಫರಿದಾಬಾದ್ ಭಯೋತ್ಪಾದಕ ಘಟಕದ ಶಂಕಿತ ಭಯೋತ್ಪಾದಕ ಮೊಹಮ್ಮದ್ ಉಮರ್ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಈತ ಹರಿಯಾಣ ನಗರದ ಅಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಉಮರ್ ತನ್ನ ಇಬ್ಬರು ಸಹಚರರೊಂದಿಗೆ ಈ ದಾಳಿಯನ್ನು ಯೋಜಿಸಿದ್ದಾನೆ ಎಂದು ಹೇಳಲಾಗಿದೆ. ಸೋಮವಾರ ಮುಂಜಾನೆ ಫರಿದಾಬಾದ್‌ನಲ್ಲಿ ತನ್ನ ಇತರ ಸಹಚರರ ಬಂಧನದ ನಂತರ ಭೀತಿಗೊಂಡ ಅವನು ಏಕಾಂಗಿಯಾಗಿ ದಾಳಿಯೆಸಗಿದ್ದಾನೆ. ಉಮರ್ ಕಾರಿನಲ್ಲಿ ಡಿಟೋನೇಟರ್ ಇರಿಸಿ ಭಯೋತ್ಪಾದಕ ಕೃತ್ಯ ಎಸಗಿದ್ದಾನೆ.








