ಬೆಂಗಳೂರು :
ಕಾಂಗ್ರೆಸ್ ಪಕ್ಷದ ಯುವ ನಾಯಕ, ರಾಷ್ಟೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿವಿ ಶ್ರೀನಿವಾಸ್ ಅವರು ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಆಗಿ ನೇಮಕಗೊಂಡಿದ್ದಾರೆ. ಅವರಿಗೆ ಗುಜರಾತ್ ರಾಜ್ಯ ಕಾಂಗ್ರೆಸ್ ಕಾರ್ಯನಿರ್ವಹಣೆಯ ಜವಾಬ್ದಾರಿ ಹೆಗಲಿಗೇರಿಸಲಾಗಿದೆ.
ಭದ್ರಾವತಿ ಮೂಲದ ಬಿ.ವಿ ಶ್ರೀನಿವಾಸ್ ಬಿಹಾರ ಚುನಾವಣೆಯಲ್ಲಿ, ಪಶ್ಚಿಮ ಚಂಪಾರಣ್ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. ಉತ್ತರ ಭಾರತದಲ್ಲೇ ಹೆಚ್ಚು ರಾಜಕೀಯ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದ ಶ್ರೀನಿವಾಸ್, ಕಳೆದ ಚುನಾವಣೆಯಲ್ಲಿ ಕೂಡ ಇಲ್ಲಿ ಕೆಲಸ ಮಾಡಿದ್ದರು. ಈ ಬಾರಿ ಪ.ಚಂಪಾರಣ್ ಜಿಲ್ಲೆಯ ಬಗಾಹ, ಬೆಟಿಯಾ, ಚನ್ ಪಟಿಯಾ, ನರಕಟಿಯಾಗಂಜ್, ನೌತನ್ ಮತ್ತು ವಾಲ್ಮೀಕಿ ನಗರ ಕ್ಷೇತ್ರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಬಿಹಾರ ಚುನಾವಣೆಗೆ ಎಐಸಿಸಿ ವೀಕ್ಷಕರಾಗಿಯೂ ಅವರು ನೇಮಕವಾಗಿದ್ದರು.
ಎನ್.ಎಸ್.ಯು.ಐ. ಅಧ್ಯಕ್ಷ ಆಗಿ ಕಾಂಗ್ರೆಸ್ ಜತೆ ತಮ್ಮನ್ನು ಜೋಡಿಸಿಕೊಂಡ ಶ್ರೀನಿವಾಸ್, 2006ರಲ್ಲಿ ಯೂತ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿದ್ದರು. ನಂತರ, ಜಿಲ್ಲೆ ಮತ್ತು ರಾಜ್ಯ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿ ಮೂರನೇ ಸ್ಥಾನಿಯಾಗಿ ಹೊರಹೊಮ್ಮಿದ್ದರು. ಇದರಿಂದ ಅವರನ್ನು ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಡಲಾಯಿತು. ನಂತರದಲ್ಲಿ ಅಖಿಲ ಭಾರತ ಯೂತ್ ಕಾಂಗ್ರೆಸ್ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ, ಕಾರ್ಯಾಧ್ಯಕ್ಷರಾಗಿಯೂ ದುಡಿದ ಶ್ರೀನಿವಾಸ್, 2019ರಲ್ಲಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಏರಿದರು. ಯೂತ್ ಕಾಂಗ್ರೆಸ್ ಬಹುತೇಕ ಎಲ್ಲಾ ಹುದ್ದೆಗಳನ್ನು ನಿಭಾಯಿಸಿದ ವ್ಯಕ್ತಿ ಎಂದು ಗುರುತಿಸಿಕೊಂಡರು. ಹಾಗೇ, ರಾಹುಲ್ ಗಾಂಧಿ ಆಪ್ತಕೂಟದಲ್ಲೂ ಕಾಣಿಸಿಕೊಂಡಿದ್ದಾರೆ.
ಕೊರೊನಾ ಮಹಾಮಾರಿ ವೇಳೆ ದೆಹಲಿಯಲ್ಲಿ ಜನ ಸೇವೆ, ಊಟ, ಆಕ್ಸಿಜೆನ್ ವಿತರಣೆ ಮೂಲಕ ಮೆಚ್ಚುಗೆಗೆ ಪಾತ್ರರಾದರು. ಅನೇಕರ ಜೀವ ಉಳಿಸಿದರು. ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್ ಗಡಿಯಲ್ಲಿ ಹೋರಾಟ ನಡೆದಾಗ ಯೂತ್ ಕಾಂಗ್ರೆಸ್ ಹೆಸರಲ್ಲಿ 1 ವರ್ಷ ನಿರಂತರ ಊಟದ ವ್ಯವಸ್ಥೆ ಮಾಡಿದ್ದರು. ರೈತರ ಹೋರಾಟದ ವೇಳೆ ಇಂಡಿಯಾ ಗೇಟ್ ಬಳಿ ಅವರ ನೇತೃತ್ವದಲ್ಲಿ ಟ್ರಾಕ್ಯರ್ ಸುಟ್ಟು ಹಾಕಿದ ಘಟನೆ ದಿಲ್ಲಿ ಪೊಲೀಸ್ ಆಯುಕ್ತರನ್ನೇ ಬದಲಾಯಿಸುವಂತೆ ಮಾಡಿತು.
ಭಾರತ್ ಜೋಡೋ ಯಾತ್ರೆ ವೇಳೆ ಇವರೂ ಕನ್ಯಾ ಕುಮಾರಿಯಿಂದ ಕಾಶ್ಮೀರಕ್ಕೆ ಪಾದಯಾತ್ರೆ ಮಾಡಿದ್ದರು. ಪ್ರತಿಭಟನೆ, ಹೋರಾಟಗಳನ್ನು ಮಾಡುವುದಕ್ಕೇ ದೆಹಲಿಯಲ್ಲಿ ಪ್ರಸಿದ್ಧಿಯಾಗಿದ್ದ ಶ್ರೀನಿವಾಸ್ ಮೇಲೆ 100ಕ್ಕಿಂತಲೂ ಹೆಚ್ಚು ಕೇಸ್ ದಾಖಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್, ಸೋದರ ಡಿಕೆ ಸುರೇಶ್ ಗೆ ಆಪ್ತರಾಗಿರುವ ಶ್ರೀನಿವಾಸ್‌ಗೆ ವಿಧಾನ ಪರಿಷತ್ ಸೀಟಿನ ಆಫರ್ ಇತ್ತು. ಆದರೆ, ಚುನಾವಣೆ ಸ್ಪರ್ಧಿಸಿ ಗೆದ್ದು ವಿಧಾನ ಸಭೆ ಪ್ರವೇಶಿಸಬೇಕು ಎನ್ನುವುದು ಅವರ ಲೆಕ್ಕಾಚಾರ.








