ಬೆಂಗಳೂರು:
ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಅಭಿಮಾನಿಗಳ ಪಾಲಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಕಪ್ ಗೆಲುವಿನ ಸಂಭ್ರಮಾಚರಣೆ ವೇಳೆ ಭೀಕರ ಕಾಲ್ತುಳಿತಕ್ಕೆ ಸಾಕ್ಷಿಯಾಗಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಐಪಿಎಲ್ ಪಂದ್ಯಗಳೇ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.
ಕಾಲ್ತುಳಿತದ ಬಳಿಕ ನ್ಯಾ.ಮೈಕೆಲ್ ಕುನ್ಹಾ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಜನರು ಸೇರುವ ಪಂದ್ಯಗಳನ್ನು ಆಯೋಜಿಸುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿತ್ತು. ಇದರ ಬಳಿಕ ಚಿನ್ನಸ್ವಾಮಿಯಲ್ಲಿ ಯಾವುದೇ ದೇಶಿಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿಲ್ಲ. ನಿಗದಿಯಾ ಮಹಿಳಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯ, ಸೆಮಿಫೈನಲ್, ಫೈನಲ್ ಪಂದ್ಯವನ್ನೂ ಕೂಡ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.
ಇದರಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ್ನು ಐಪಿಎಲ್ ಪಂದ್ಯಗಳ ಬಗ್ಗೆ ಅನಿಶ್ಚಿತತೆ ಎದುರಾಗಿದೆ. ಒಂದೊಮ್ಮೆ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳು ರದ್ದಾದರೆ ಮುಂದಿನ ಆವೃತ್ತಿಯ ಫೈನಲ್ ಪಂದ್ಯದ ಆತಿಥ್ಯ ಕೂಡ ಕೈತಪ್ಪಲಿದೆ. ಹೌದು ಯಾವ ತಂಡ ಐಪಿಎಲ್ ಚಾಂಪಿಯನ್ ಆಗುತ್ತದ್ದೋ ಅವರ ತವರಿನಲ್ಲಿ ಮುಂದಿನ ಫೈನಲ್ ಪಂದ್ಯ ನಡೆಯುವುದು ವಾಡಿಕೆ. ಆದರೆ ಚಿನ್ನಸ್ವಾಮಿಯಲ್ಲಿ ಪಂದ್ಯ ಇಲ್ಲವಾದಲ್ಲಿ ಬೇರೆ ತಾಣಕ್ಕೆ ಫೈನಲ್ ಪಂದ್ಯದ ಆತಿಥ್ಯ ಸಿಗಲಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಆರ್‌ಸಿಬಿ ತನ್ನ ಎಲ್ಲಾ ತವರು ಪಂದ್ಯಗಳನ್ನು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಕ್ರೀಡಾಂಗಣದಲ್ಲಿ ಆಡುವ ಸಾಧ್ಯತೆ ಇದೆ ಎಂದು ಹೇಳಿದೆ. ಆದರೆ ಇನ್ನೂ ದೃಢಪಟ್ಟಿಲ್ಲ.
“ಆರ್‌ಸಿಬಿ ಫ್ರಾಂಚೈಸಿ ಸ್ಥಳವನ್ನು ಹುಡುಕುತ್ತಿದೆ ಮತ್ತು ನಾವು ಅವರಿಗೆ ನಮ್ಮ ಕ್ರೀಡಾಂಗಣವನ್ನು ನೀಡಿದ್ದೇವೆ. ಪ್ರಾಥಮಿಕ ಚರ್ಚೆಗಳು ನಡೆಯುತ್ತಿವೆ ಮತ್ತು ಕೆಲವು ತಾಂತ್ರಿಕ ವಿಷಯಗಳನ್ನು ಬಗೆಹರಿಸಬೇಕಾಗಿದೆ. ವಿಷಯಗಳು ಸರಿಯಾಗಿ ನಡೆದರೆ, ಬಹುಶಃ ಹೌದು, ಪುಣೆ ಪಂದ್ಯಗಳನ್ನು ಆಯೋಜಿಸುತ್ತದೆ” ಎಂದು ಎಂಸಿಎ ಕಾರ್ಯದರ್ಶಿ ಕಮಲೇಶ್ ಪೈ ಬಹಿರಂಗಪಡಿಸಿದ್ದಾರೆ.
ಮೈಕೆಲ್ ಕುನ್ಹಾ ಆಯೋಗವು ಕ್ರೀಡಾಂಗಣದ ವಿನ್ಯಾಸ ಮತ್ತು ರಚನೆ ಹೆಚ್ಚಿನ ಜನರು ಸೇರುವ ಸಮಾರಂಭಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ ಎಂದು ತನ್ನ ವರದಿಯಲ್ಲಿ ಹೇಳಿದೆ. ದೊಡ್ಡ ಸಂಖ್ಯೆಯ ಜನರು ಸೇರಿದರೆ ಅಪಾಯ ಎದುರಾಗಬಹುದು. ಇಂತಹ ಸಮಾರಂಭಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸಿಯೇ ಇನ್ನು ಪಂದ್ಯಗಳನ್ನು ನಡೆಸಬೇಕು ಎಂದಿದೆ.








