ಬೆಂಗಳೂರು
ಜೆಡಿಎಸ್ ಮಾಜಿ ಸಂಸದ, ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಸದ್ಯಕ್ಕೆ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸಿದ್ದ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಈ ಶಿಕ್ಷೆಯನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು. ನಿನ್ನೆ ಆ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿತು.
ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್ ಸಲ್ಲಿಸಿದ ಸಾಕ್ಷ್ಯಗಳಲ್ಲಿ ಪರಸ್ಪರ ಹೊಂದಾಣಿಕೆಯಿಲ್ಲ, ಪ್ರಜ್ವಲ್ ರೇವಣ್ಣ ತಪ್ಪಿತಸ್ಥನೆಂದು ತೋರಿಸುವ ಯಾವುದೇ ಪ್ರಬಲ ಸಾಕ್ಷ್ಯಗಳಿಲ್ಲ. 4 ವರ್ಷಗಳ ಬಳಿಕ ದೂರು ದಾಖಲಿಸಲಾಗಿದೆ. ಯಾವುದೇ ವಿಶ್ವಾಸಾರ್ಹತೆ ಇಲ್ಲದ ವಿಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗಿದೆ. ಫಾರ್ಮ್ಹೌಸ್ನ ಅಂದಿನ ಮಾಲೀಕರ ಹೇಳಿಕೆಯನ್ನು ದಾಖಲಿಸಿಲ್ಲ. ಕೃತ್ಯ ನಡೆದ ಸ್ಥಳದಲ್ಲಿದ್ದವರ ಹೇಳಿಕೆ ದಾಖಲಿಸಿಲ್ಲ ಎಂದಿದ್ದರು.
ಸಂತ್ರಸ್ತೆಯ ಮೊಬೈಲ್ ಸಿಡಿಆರ್ ಹಾಜರುಪಡಿಸಿಲ್ಲ. ಸಂತ್ರಸ್ತೆಯ ಬಟ್ಟೆ ವಶಕ್ಕೆ ಪಡೆದ ರೀತಿಯ ಬಗ್ಗೆಯೂ ಅನುಮಾನಗಳಿವೆ. ಹೀಗಾಗಿ ಪ್ರಜ್ವಲ್ ಅವರಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡುವಂತೆ ಅವರು ವಾದ ಮಂಡನೆ ವೇಳೆ ಮನವಿ ಮಾಡಿದ್ದರು. ನಮ್ಮ ವಾದವನ್ನು ಸೂಕ್ತ ರೀತಿಯಲ್ಲಿ ಆಲಿಸದೇ ವಿಚಾರಣಾಧೀನ ನ್ಯಾಯಾಲಯವು ಗರಿಷ್ಠ ಶಿಕ್ಷೆಯನ್ನು ವಿಧಿಸಿದೆ ಎಂದು ಪ್ರಜ್ವಲ್ ಪರ ವಕೀಲರು ಇಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಆದರೆ ನಿನ್ನೆ ಪ್ರಜ್ವಲ್ಗೆ ಜಾಮೀನು ಸಿಕ್ಕಿಲ್ಲ. ಪ್ರಾಸಿಕ್ಯೂಷನ್ ವಾದಮಂಡನೆಗೆ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಸ್ ಮುದಗಲ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರ ಪೀಠ ಅರ್ಜಿ ವಿಚಾರಣೆ ನಡೆಸಿತು. ಪ್ರಾಸಿಕ್ಯೂಷನ್ ಪರವಾಗಿ ನವೆಂಬರ್ 24ರಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಲಿದ್ದಾರೆ.








