ಸರ್ವಪಕ್ಷ ಸಭೆಗೆ ಕಾಂಗ್ರೆಸ್‌ ಆಗ್ರಹ…..!

ನವದೆಹಲಿ:

    ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡಲೇ ಸರ್ವಪಕ್ಷ ಸಭೆ ಕರೆದು, ಚರ್ಚೆ ನಡೆಸಬೇಕು. ಜೊತೆಗೆ ಡಿಸೆಂಬರ್‌ 1 ರಿಂದ ಪ್ರಾರಂಭವಾಗಲಿರುವ ಸಂಸತ್‌ ಚಳಿಗಾಲದ ಅಧಿವೇಶನವನ್ನು ಮುಂಚಿತವಾಗಿಯೇ ಆರಂಭಿಸಬೇಕು ಎಂದು ಕಾಂಗ್ರೆಸ್‌ ಗುರುವಾರ ಆಗ್ರಹಿಸಿದೆ.

    ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್‌ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥರಾದ ಪವನ್‌ ಖೇರಾ ಅವರು, ಸ್ಫೋಟ ನಡೆದು 48 ಗಂಟೆಗಳಾದ ಬಳಿಕ ಕೇಂದ್ರ ಸಂಪುಟವು ಇದು ಭಯೋತ್ಪಾದಕ ಕೃತ್ಯ ಎಂಬುದನ್ನು ಹೇಳಿದೆ. ಇಷ್ಟ ಸಮಯವೇಕೆ ಬೇಕಾಯಿತು? ಈ ಮೂಲಕ ಮೂರು ದಿನಗಳವರೆಗೆ ಗೊಂದಲ ಮತ್ತು ಊಹಾಪೋಹಗಳು ಉಲ್ಬಣಗೊಳ್ಳಲು ಅವಕಾಶ ನೀಡಲಾಯಿತು. ಯುಪಿಎ ಅವಧಿಯಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ನಂತರ, ಆಗಿನ ಗೃಹ ಸಚಿವ ಶಿವರಾಜ್ ಪಾಟೀಲ್ ರಾಜೀನಾಮೆ ನೀಡಿದ್ದರು. ಈಗ ಸರ್ಕಾರದ ಯಾರಾದರು ಒಬ್ಬರು ಈ ಘಟನೆಯ ಹೊಣೆಗಾರಿಕೆ ಹೊರಲೇಬೇಕು ಎಂದು ಆಗ್ರಹಿಸಿದರು.

   ಗುಪ್ತಚರ ಸಂಸ್ಥೆಗಳು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿಗಾ ಇಟ್ಟಿದ್ದರೂ, 2,900 ಕೆಜಿ ಸ್ಫೋಟಕಗಳು ಫರಿದಾಬಾದ್ ತಲುಪಿದ್ದು ಹೇಗೆ? ಎಂದು ಪ್ರಶ್ನಿಸಿದರು.ಭಯೋತ್ಪಾದಕ ದಾಳಿ ನಡೆದಾಗ ವಿರೋಧ ಪಕ್ಷಗಳು ಯಾವಾಗಲೂ ಸರ್ಕಾರದ ಜೊತೆ ನಿಂತಿವೆ. ಅದನ್ನು ಮುಂದುವರಿಸುತ್ತವೆ, ಆದರೆ, ಪ್ರಶ್ನೆಗಳನ್ನು ಕೇಳುವುದು ನಮ್ಮ ಕರ್ತವ್ಯ. ಇದಕ್ಕೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ? ಎಂದು ಪ್ರಶ್ನಿಸಿದರು.

   ಪೆಹಲ್ಗಾಮ್‌ ದಾಳಿಯ ಬಳಿಕ ಮುಂದಿನ ಯಾವುದೇ ಭಯೋತ್ಪಾದಕ ದಾಳಿಯನ್ನು ಯುದ್ಧ ಎಂದು ಪರಿಗಣಿಸಲಾಗುತ್ತದೆ ಎಂಬ ನೀತಿಯನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಈಗ ಅದೇ ನೀತಿಗೆ ಸರ್ಕಾರ ಬದ್ಧವಾಗಿದೆಯೇ’ ಎಂದೂ ಪ್ರಶ್ನಿಸಿದ್ದಾರೆ.

Recent Articles

spot_img

Related Stories

Share via
Copy link