ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಕುಸಿತ ಕಂಡ ಭಾರತ

ದುಬೈ: 

      ಪ್ರವಾಸಿ ದಕ್ಷಿಣ ಆಫ್ರಿಕಾ  ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೋಲು ಕಂಡ ಭಾರತ ತಂಡ ನಾಲ್ಕನೇ ಆವೃತ್ತಿಯ  ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಕುಸಿತ ಕಂಡಿದೆ. 2ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದೆ. ಗೆಲುವು ಕಂಡ ಹಾಲಿ ಚಾಂಪಿಯನ್‌ ದಕ್ಷಿಣ ಆಫ್ರಿಕಾ ತಂಡ ಶೇ.66.67 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ. 4ನೇ ಸ್ಥಾನದಲ್ಲಿರುವ ಭಾರತ ಶೇ.54.17 ಅಂಕ ಹೊಂದಿದೆ.

     ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಶೇ.100 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಶ್ರೀಲಂಕಾ ಶೇ.66.67 ಅಂಕದೊಂದಿಗೆ ಮೂರನೇ ಸ್ಥಾನಕ್ಕೆ ಇಳಿದಿದೆ. ಭಾರತ ಇಂಗ್ಲೆಂಡ್‌ ವಿರುದ್ಧ 2-2 ಡ್ರಾ , ವಿಂಡೀಸ್‌ ವಿರುದ್ಧ 2-0 ಗೆಲುವು ಮತ್ತು ಇದೀಗ ದ.ಆಫ್ರಿಕಾ ವಿರುದ್ಧ 2 ಪಂದ್ಯಗಳ ಸರಣಿಯಲ್ಲಿ 0-1ರಿಂದ ಹಿಂದಿದೆ. ತಂಡಕ್ಕೆ 2025-27ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇನ್ನೂ 10 ಟೆಸ್ಟ್‌ ಪಂದ್ಯಗಳನ್ನಾಡುವುದು ಬಾಕಿ ಇದೆ.

     ಶ್ರೀಲಂಕಾ ಹಾಗೂ ನ್ಯೂಜಿಲೆಂಡ್‌ನಲ್ಲಿ ತಲಾ 2, ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 5 ಪಂದ್ಯಗಳು ಬಾಕಿ ಇವೆ. ಸದ್ಯದ ಲೆಕ್ಕಾಚಾರದ ಪ್ರಕಾರ, ಭಾರತ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಬೇಕಿದ್ದರೆ ಬಾಕಿ ಇರುವ 10 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲ್ಲಬೇಕಿದೆ. ಆರಂಭಿಕ ಎರಡು ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿದ್ದ ಭಾರತ ಕಳೆದ ಬಾರಿಯ ಮೂರನೇ ಆವೃತ್ತಿಯಲ್ಲ ಫೈನಲ್‌ ಪ್ರವೇಶಿಸಲು ವಿಫಲವಾಗಿತ್ತು.

     ಭಾನುವಾರ ಮಧ್ಯಾಹ್ನ ಮುಕ್ತಾಯಗೊಂಡಿದ್ದ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಎದುರಾಗಿದ್ದು 30 ರನ್‌ ಸೋಲು. ಬೌಲರ್‌ಗಳೇ ಮೇಲುಗೈ ಸಾಧಿಸಿದ ಪಂದ್ಯದಲ್ಲಿ ಭಾರತ ಗೆಲ್ಲಲು ಕೇವಲ 124 ರನ್‌ ಗಳಿಸಬೇಕಿತ್ತು. ಆದರೆ ನಾಟಕೀಯ ಕುಸಿತ ಕಂಡ ಭಾರತ 93 ರನ್‌ ಗಳಿಸುವಷ್ಟರಲ್ಲೇ ಗಂಟುಮೂಟೆ ಕಟ್ಟಿದರು. ಇದರೊಂದಿಗೆ ದ.ಆಫ್ರಿಕಾ ತಂಡ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. 

     ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಎರಡನೇ ಪಂದ್ಯ ನವೆಂಬರ್‌ 22ರಂದು ಗುವಾಹಟಿಯಲ್ಲಿ ನಡೆಯಲಿದೆ. ಸರಣಿ ಸೋಲು ತಪ್ಪಿಸಲು ಭಾರತಕ್ಕೆ ಈ ಪಂದ್ಯ ಗೆಲ್ಲಲೇ ಬೇಕಿದೆ. ಡ್ರಾ ಗೊಂಡರೂ ಸರಣಿ ಬವುಮಾ ಪಡೆಯ ಪಾಲಾಗಲಿದೆ. ಕುತ್ತಿಗೆ ನೋವಿನಿಂದ ಬಳಲುತ್ತಿರುವ ಕಾರಣ ನಾಯಕ ಶುಭಮನ್‌ ಗಿಲ್‌ ಈ ಪಂದ್ಯದಲ್ಲಿ ಆಡುವುದು ಅನುಮಾನ. ಗಿಲ್‌ ಅಲಭ್ಯರಾದರೆ ಉಪನಾಯಕ ರಿಷಭ್‌ ಪಂತ್‌ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

Recent Articles

spot_img

Related Stories

Share via
Copy link