ಡಿಜಿಟಲ್‌ ಅರೆಸ್ಟ್‌ನಿಂದ ಹಣ ಕಳೆದುಕೊಂಡ ಬೆಂಗಳೂರಿನ ಮಹಿಳೆ

ಬೆಂಗಳೂರು

      ರಾಜ್ಯದಲ್ಲಿ ಇತ್ತೀಚೆಗೆ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳ   ಸಂಖ್ಯೆ ಹೆಚ್ಚಳವಾಗಿದೆ. ಈ ನಡುವೆ ಮಹಿಳಾ ಟೆಕ್ಕಿಯೊಬ್ಬರು ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡಿರುವುದು ಬೆಳಕಿಗೆ ಬಂದಿದ್ದು, ಇದು ರಾಜ್ಯದಲ್ಲೇ, ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡ ಅತಿ ದೊಡ್ಡ ಮೊತ್ತ ಎನ್ನಲಾಗಿದೆ. ಇಂದಿರಾನಗರದ ನಿವಾಸಿ, 57 ವರ್ಷದ ಮಹಿಳಾ ಟೆಕ್ಕಿ ವಂಚನೆಗೆ ಒಳಗಾಗಿದ್ದಾರೆ. ಮಹಿಳೆಯನ್ನು ಸೈಬರ್ ಅಪರಾಧಿಗಳು 6 ತಿಂಗಳಿಗೂ ಹೆಚ್ಚು ಕಾಲ ನಿರಂತರ ಕಣ್ಗಾವಲಿನಲ್ಲಿರಿಸಿ, ಹಣ ದೋಚಿದ್ದಾರೆ. 

     2024ರ ಸೆ.15 ರಂದು ಮಹಿಳೆಗೆ, ಡಿಎಚ್​ಎಲ್​ ಕೊರಿಯರ್ ಕಂಪನಿಯವರು ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಆಕೆಯ ಹೆಸರಿನಲ್ಲಿ ಮೂರು ಕ್ರೆಡಿಟ್ ಕಾರ್ಡ್‌ಗಳು, ನಾಲ್ಕು ಪಾಸ್‌ಪೋರ್ಟ್‌ಗಳು ಮತ್ತು ನಿಷೇಧಿತ ಎಂಡಿಎಂಎ ಮಾದಕ ದ್ರವ್ಯಗಳನ್ನು ಒಳಗೊಂಡಿರುವ ಒಂದು ಪ್ಯಾಕೇಜ್ ಮುಂಬೈನ ಅಂಧೇರಿಯಲ್ಲಿರುವ ಡಿಎಚ್‌ಎಲ್​ ಕೇಂದ್ರಕ್ಕೆ ಬಂದಿದೆ ಎಂದಿದ್ದಾರೆ. ಆದರೆ, ತಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಕೊರಿಯರ್ ಜತೆ ಯಾವುದೇ ಸಂಪರ್ಕವಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಆಗ, ಮೊಬೈಲ್‌ ಸಂಖ್ಯೆ ಪ್ಯಾಕೇಜ್‌ಗೆ ಲಿಂಕ್ ಆಗಿರುವುದರಿಂದ ಇದು ಸೈಬರ್ ಅಪರಾಧವಾಗಿರಬಹುದು ಎಂದು ಆತ ಹೇಳಿದ್ದಾನೆ. ಆಕೆ ಪ್ರತಿಕ್ರಿಯಿಸುವ ಮೊದಲು, ಕರೆಯನ್ನು ಸಿಬಿಐ ಅಧಿಕಾರಿಯ ಸೋಗಿನಲ್ಲಿರುವ ವ್ಯಕ್ತಿಗೆ ವರ್ಗಾಯಿಸಲಾಗಿತ್ತು.

    ನಂತರ, ಮಹಿಳೆಯ ಗುರುತನ್ನು ದುರುಪಯೋಗಪಡಿಸಿಕೊಂಡ ಸೈಬರ್ ವಂಚಕರು, ಆಕೆಯ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಹೇಳಿ, ಪೊಲೀಸರನ್ನು ಸಂಪರ್ಕಿಸದಂತೆ ಎಚ್ಚರಿಕೆ ನೀಡಿದ್ದಾರೆ. ತಾವು ಕೇಳಿದ ಮಾಹಿತಿ ನೀಡದಿದ್ದರೆ ಆಕೆಯ ಕುಟುಂಬವನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. ತನ್ನ ಮಗನ ಮದುವೆ ಸಮೀಪಿಸುತ್ತಿದ್ದರಿಂದ ಮಹಿಳೆ ಹೆದರಿ, ವಂಚಕರು ಹೇಳಿದ ರೀತಿಯಲ್ಲೇ ನಡೆದುಕೊಂಡಿದ್ದರು. 

    ಕೆಲವು ದಿನಗಳ ಬಳಿಕ ಸ್ಕೈಪ್ ವಿಡಿಯೋ ಕರೆಯ ಮೂಲಕ ಸಂತ್ರಸ್ತೆಯನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ. ನಂತರ, ಸಿಬಿಐ ಅಧಿಕಾರಿ ಪ್ರದೀಪ್ ಸಿಂಗ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ರಾಹುಲ್ ಯಾದವ್ ಎಂಬ ಇನ್ನೊಬ್ಬ ವ್ಯಕ್ತಿಗೆ ಒಂದು ವಾರದ ಕಾಲ ಆಕೆಯನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಿದ್ದ. ಈ ಸಮಯದಲ್ಲಿ, ಸಂತ್ರಸ್ತೆ ವರ್ಕ್ ಫ್ರಂ ಹೋಮ್​ನಲ್ಲಿದ್ದರು.

    2024ರ ಸೆಪ್ಟೆಂಬರ್ 23ರಂದು, ಆರ್‌ಬಿಐನ ಹಣಕಾಸು ಗುಪ್ತಚರ ಘಟಕಕ್ಕೆ ಆಸ್ತಿಗಳನ್ನು ಘೋಷಿಸುವಂತೆ ಮಹಿಳೆಗೆ ಪ್ರದೀಪ್ ಸಿಂಗ್ ಸೂಚಿಸಿದ್ದ. ಅದರಂತೆ ಮಹಿಳೆ ನಡೆದುಕೊಂಡಿದ್ದರು. ನಂತರ ವಂಚಕರು ಹಂತಹಂತವಾಗಿ ಹಣ ವಸೂಲಿ ಮಾಡಿದ್ದರು. 

    ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ವಂಚಕರ ಸೂಚನೆಯಂತೆ ಸಂತ್ರಸ್ತೆ ತನ್ನ ಫಿಕ್ಸೆಡ್ ಡಿಪಾಸಿಟ್​​ಗಳನ್ನು ಹೊರತುಪಡಿಸಿ ಇತರ ಉಳಿತಾಯ ಹಣ 31.83 ಕೋಟಿ ರೂ.ಗಳನ್ನು 187 ವಹಿವಾಟುಗಳಲ್ಲಿ ವಂಚಕರಿಗೆ ವರ್ಗಾಯಿಸಿದ್ದಾಳೆ. 2025ರ ಫೆಬ್ರವರಿಯೊಳಗೆ ಪರಿಶೀಲನೆ ಮಾಡಿದ ನಂತರ ಹಣವನ್ನು ಹಿಂತಿರುಗಿಸಲಾಗುವುದು ಎಂದು ಸಂತ್ರಸ್ತೆಗೆ ನಕಲಿ ತನಿಖಾ ಅಧಿಕಾರಿಗಳು ಭರವಸೆ ನೀಡಿದ್ದರು. ಅಲ್ಲದೆ, ಸಂತ್ರಸ್ತೆಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೂಡ ಕೊಟ್ಟಿದ್ದರು. ಆದರೆ, ಹಣವನ್ನು ವಾಪಸ್ ನೀಡಲು ವಂಚಕರು ಒಂದಲ್ಲ ಒಂದು ಅಡ್ಡಿ ಹೇಳುತ್ತಲೇ ಇದ್ದರು. ನಂತರ ಅನುಮಾನಗೊಂಡ ಸಂತ್ರಸ್ತೆ ಬೆಂಗಳೂರು ಪೂರ್ವ ಸೈಬರ್ ಕ್ರೈಮ್ ಪೊಲೀಸರಿಗೆ 2025ರ ನವೆಂಬರ್ 14 ರಂದು ದೂರು ನೀಡಿದ್ದರು. ಹೀಗಾಗಿ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

Recent Articles

spot_img

Related Stories

Share via
Copy link