ಮೈಸೂರು :
ಯಕ್ಷಗಾನ ಕಲಾವಿದರಲ್ಲಿ ಬಹುತೇಕರಲ್ಲಿ ಸಲಿಂಗಕಾಮ ಪ್ರವೃತ್ತಿ ಬೆಳೆಯುತ್ತಿತ್ತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾದ ಬಳಿಕ ಕ್ಷಮೆಯಾಚನೆ ಮಾಡಿದ್ದಾರೆ. ಯಕ್ಷಗಾನ ಕಲಾವಿದರು, ಅಭಿಮಾನಿಗಳು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಅನೇಕರು ಈ ಹೇಳಿಕೆಯನ್ನು ಖಂಡಿಸಿದ್ದರು.
ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು ಇರುತ್ತಿದ್ದರು. ಅಲ್ಲಿ ಅಂತಹ ಅನಿವಾರ್ಯತೆ ಇತ್ತು. ಯಕ್ಷಗಾನ ಕಲಾವಿದರೊಳಗೆ ಎಷ್ಟೋ ಬಾರಿ ಹೋಮೋಸೆಕ್ಸ್ ಬೆಳೀತಿತ್ತು ಎಂದು ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ‘ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು’ ಹಾಗೂ ‘ನಾವು ಕೂಗುವ ಕೂಗು’ ಕೃತಿಗಳನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಪುರುಷೋತ್ತಮ ಬಿಳಿಮಲೆ ಭಾಷಣದಲ್ಲಿ ಹೇಳಿದ್ದರು. ಅವರು ನೀಡಿದ ಈ ಹೇಳಿಕೆ ಭಾರೀ ವಿವಾದ ಹುಟ್ಟಿಸಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ವೈರಲ್ ಆಗಿತ್ತು.
ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಯಕ್ಷಗಾನ ಕಲಾವಿದರನ್ನು ಸಲಿಂಗಕಾಮಿಗಳು ಎಂದು ಕರೆದು ಅವಮಾನ ಮಾಡಲಾಗಿದೆ. ಬಿಳಿಮಲೆ ಅವರು ಕ್ಷಮೆ ಯಾಚಿಸಬೇಕು. ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಲಾಗಿತ್ತು. ಪುತ್ತೂರಿಗೆ ಭೇಟಿ ನೀಡಿದ್ದು ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು, ʼಈ ಹೇಳಿಕೆ ಕೀಳು ಅಭಿರುಚಿ ಹಾಗೂ ಅವಮಾನ ಮಾಡುವ ಉದ್ದೇಶದಿಂದ ಕೂಡಿದೆʼ ಎಂದಿದ್ದರು.
ಸ್ತ್ರೀವೇಷದ ಕಲಾವಿದ ಏನಾದರೂ ಸಲಿಂಗಕಾಮ ನಿರಾಕರಿಸುತ್ತಿದ್ದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ಮುಂದಿನ ವರ್ಷ ಮೇಳವೇ ಕಲಾವಿದರಿಗೆ ಸಿಗುತ್ತಿರಲಿಲ್ಲ. ವೇದಿಕೆಯ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಮೇಳದಲ್ಲಿ ಅವಕಾಶ ಇಲ್ಲದೆ ಹೋದರೆ ಬದುಕೇ ಇಲ್ಲವೆಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು ಎಂದಿದ್ದರು.
ಕಲೆ, ದೈಹಿಕ ಕಾಮನೆಗಳು, ಭಾವನೆಗಳು ಇವೆಲ್ಲವನ್ನು ರಂಗಭೂಮಿಯ ಎದುರು ಕಾಣುವ ಲೋಕಕ್ಕಿಂತ ಭಿನ್ನವಾಗಿ ಪ್ರಕಟಗೊಳ್ಳುವ ಬಗೆ ಇದೆಯಲ್ಲ ಇವೆಲ್ಲ ವಿದ್ವಾಂಸರು, ಜಾನಪದ ವಿದ್ವಾಂಸರು ತಿಳಿದುಕೊಂಡು, ಅರ್ಥಮಾಡಿಕೊಂಡು ಯಾರಿಗೂ ತೊಂದರೆ ಆಗದ ಹಾಗೆ ಯಾರ ಭಾವನಗೂ ನೋವಾಗದ ಹಾಗೆ ಅಕ್ಷರದಲ್ಲಿ ಸುಂದರವಾಗಿ ಬರೆಯುವ ಕಲೆಯನ್ನು ಕಲಿತುಕೊಂಡರೆ ಯಕ್ಷಗಾನ ಜಾನಪದಕ್ಕೆ ಇನ್ನೊಂದು ಹೊಸ ಆಯಾಮ ಬರುತ್ತದೆ. ಈ ಅರ್ಥದಲ್ಲಿ ನನಗೆ ನಾವು ಕೂಗುವ ಕೂಗು ತುಂಬಾ ಸಂತೋಷ ಕೊಟ್ಟ ಕೃತಿ, ಇದರಲ್ಲಿ ಏಳು ಮಂಟೆಸ್ವಾಮಿ ಪರಂಪರೆಯ ನೀಲಗಾರರ ಆತ್ಮಕಥನಗಳಿವೆ ಎಂದಿದ್ದರು.
ಇಲ್ಲಿ ನಾವು ಸತ್ಯವನ್ನು ಹೇಳಲು ಹಿಂಜರಿಯಬಾರದು. ಕಲಾವಿದರು ಮೇಳಕ್ಕೆಂದು ಆರೆಂಟು ತಿಂಗಳು ತಿರುಗಾಟದಲ್ಲೇ ಇದ್ದರಿಂದ, ಅವರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿಗಳೂ ಒತ್ತಡದಲ್ಲಿರುತ್ತಿದ್ದರು. ಅವರ ಮೇಲೆ ಇತರರಿಗೆ ಮೋಹ ಇರುತ್ತಿತ್ತು ಎಂದು ಹೇಳಿದ್ದರು.
ಈಗ ನಾವು ಹೋಮೋ ಸೆಕ್ಸುವಲ್ ಬಗ್ಗೆ ಮಾತನಾಡುತ್ತೇವೆ, ಬಹಳ ಕೇಳುತ್ತೇವೆ, ಹಿಂದೆ ಅಂತಹ ಮುಕ್ತ ವಾತಾವರಣವಿರಲಿಲ್ಲ. ಯಕ್ಷಗಾನದಲ್ಲಿ ಸ್ತ್ರೀ ವೇಷಧಾರಿಗಳ ಮೇಲೆ ಒತ್ತಡ, ನಾವು ಚಿಕ್ಕವರಿದ್ದಾಗ ನಮ್ಮ ಫಸ್ಟ್ ಕ್ರಶ್ ಗಳು ಸ್ತ್ರೀ ವೇಷಧಾರಿಗಳು, ಈಗ ಸಿನಿಮಾ ನಟ, ನಟಿಯರ ಹೆಸರನ್ನು ಶಾಲೆ-ಕಾಲೇಜಿಗೆ ಹೋಗುವ ಹುಡುಗರು, ಹುಡುಗಿಯರು ಹೇಳುತ್ತಾರೆ, ನಮಗೆ ಆಗ ಇದ್ದದ್ದು ಕ್ರಶ್ ಸ್ತ್ರೀ ವೇಷಧಾರಿಗಳ ಮೇಲೆ. ಅವರು ರಂಗದ ಮೇಲೆ ಬಂದು ಕುಣಿದರೆ ನೋಡಲು ಏನು ಚೆಂದವಿತ್ತು ಎಂದಿದ್ದರು.
ಆಗೆಲ್ಲ ಕಲಾವಿದ ಮೇಳಕ್ಕೆಂದು ಹೋಗಿ ವಾಪಸಾದಾಗ ಹಲವರಿಗೆ ಮನೆಯೇ ಇರುತ್ತಿರಲಿಲ್ಲ. ಅಂತಹ ದುರಂತ ಕಾವ್ಯಗಳು ಅವರ ಬದುಕಿನಲ್ಲಿವೆ. ಅವನ್ನು ಗ್ರಹಿಸುವ ಶಕ್ತಿ ಸಮಾಜಕ್ಕೆ ಇಲ್ಲವಾಗಿದೆ. ಹಾಡಿನ ಚಪ್ಪಾಳೆಯಷ್ಟೇ ಮುಖ್ಯವಾಗಬಾರದು. ಅವರ ಬದುಕಿನ ಬಿಕ್ಕಟ್ಟಿನ ಕಾವ್ಯಕ್ಕೆ ಅಕ್ಷರಸ್ಥರು, ವಿದ್ವಾಂಸರು ದನಿಯಾಗಬೇಕು ಎಂದಿದ್ದರು.
ಇದು ವೈರಲ್ ಆದ ಬಳಿಕ ಬಿಳಿಮಲೆ ಕ್ಷಮೆ ಯಾಚಿಸಿದ್ದಾರೆ. ಯಕ್ಷಗಾನ ಕಲಾವಿದರನ್ನು ಅವಮಾನ ಮಾಡುವ ಉದ್ದೇಶ ನನಗೆ ಇರಲಿಲ್ಲ. ನಾನು ಅವರ ಬಗ್ಗೆ ಯಾವುದೇ ಕೀಳು ಭಾವನೆ ಹೊಂದಿಲ್ಲ. ಯಕ್ಷಗಾನ ಕಲಾವಿದರ ಬದುಕು ಹಸನಾಗಬೇಕು ಎಂಬುದಷ್ಟೇ ನನ್ನ ಆಶಯ. ಆದಾಗ್ಯೂ, ಯಾರಿಗಾದರೂ ನೋವಾಗಿದ್ದರೆ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ. ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ನನ್ನನ್ನು ತೆಗೆದರೆ ಹೋಗಲು ಸಿದ್ಧ ಎಂದು ಬಿಳಿಮಲೆ ಹೇಳಿದ್ದಾರೆ.








