ಬೆಂಗಳೂರು ದರೋಡೆ ಪ್ರಕರಣದ ಇಬ್ಬರು ಆರೋಪಿಗಳು ಅರೆಸ್ಟ್

ಬೆಂಗಳೂರು

    ಎಟಿಎಂಗಳಿಗೆ ಹಣ ತುಂಬುವ ವಾಹನ ದರೋಡೆ ಪ್ರಕರಣ   ನಡೆದ 24 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯಗಳನ್ನಾಧರಿಸಿ ಖದೀಮರ ಬೆನ್ನತ್ತಿದ್ದ ಪೊಲೀಸರು, ತಿರುಪತಿಯಲ್ಲಿದ್ದ ಇಬ್ಬರು ಕಳ್ಳರನ್ನು ಅರೆಸ್ಟ್‌ ಮಾಡಿದ್ದಾರೆ.

   ಖದೀಮರು ದರೋಡೆಗೆ ಬಳಸಿದ್ದ ಇನ್ನೋವಾ ಕಾರು ಆಂಧ್ರಪ್ರದೇಶದ ಚಿತ್ತೂರು ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿರುಪತಿಯಲ್ಲಿ ಕಾರು ಬಿಟ್ಟು ಆರೋಪಿಗಳು ಪರಾರಿ ಆಗಿದ್ದರು. ಕಾರಿನ ನಂಬರ ಪ್ಲೇಟ್ ಬದಲಿಸಿ, ಓಡಾಡುತ್ತಿದ್ದ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಣಸವಾಡಿಯ ಕಲ್ಯಾಣ ನಗರದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದರೋಡೆಯ ವೇಳೆ ಕರ್ನಾಟಕ ನೋಂದಣಿ ನಂಬರ್ ಪ್ಲೇಟ್‌ ಹಾಕಿದ್ದ ಆರೋಪಿಗಳು, ಪರಾರಿಯಾದ ಬಳಿಕ ಯುಪಿ ನೋಂದಣಿಯ ನಂಬರ್ ಪ್ಲೇಟ್ ಹಾಕಿಕೊಂಡು ಓಡಾಡುತ್ತಿದ್ದರು ಎನ್ನಲಾಗಿದೆ. ಸಿಸಿಟಿವಿ ದೃಶ್ಯ ಮತ್ತು ಲೊಕೇಶನ್ ಆಧರಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದಿ ಮಾತನಾಡಿ ಆರೋಪಿಗಳು ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಆದರೆ, ಅನುಮಾಸ್ಪದವಾಗಿ ವರ್ತಿಸಿದ್ದರಿಂದ ಅವರು ಸಿಕ್ಕಿಬಿದ್ದಿದ್ದಾರೆ.

    ರಾಜಧಾನಿ ಬೆಂಗಳೂರಿನಲ್ಲಿ ನ.19ರಂದು ಹಾಡಹಗಲೇ 7.11 ಕೋಟಿ ರೂ. ದರೋಡೆ ಮಾಡಿರುವ ಘಟನೆ ನಡೆದಿತ್ತು. ಎಟಿಎಂಗಳಿಗೆ ಹಣ ಹಾಕಲು ಡೇರಿ ಸರ್ಕಲ್​ ಫ್ಲೈಓವರ್ ಮೇಲೆ ಹೋಗುತ್ತಿದ್ದ ವಾಹನ ತಡೆದು ದರೋಡೆ ಮಾಡಲಾಗಿತ್ತು. ಸುದ್ದಗುಂಟೆಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂ ಕಡೆ ಹಣ ತುಂಬಿಸಿಕೊಂಡು ಸಿಎಂಎಸ್​ ಏಜೆನ್ಸಿ ಸಿಬ್ಬಂದಿ ಹೊರಟಿದ್ದರು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದಿದ್ದ 7-8 ಜನರ ಗ್ಯಾಂಗ್, ನಾವು ಆರ್​​ಬಿಐನವರು ಎಂದು ಹೇಳಿಕೊಂಡು ಹೆದರಿಸಿದ್ದರು. ಗನ್​ಮ್ಯಾನ್ ಸೇರಿದಂತೆ ಎಲ್ಲರನ್ನೂ ಅಲ್ಲೇ ಇಳಿಸಿದ್ದ ಗ್ಯಾಂಗ್​, ವಾಹನ ಸಮೇತ ಚಾಲಕನನ್ನು ಡೇರಿ ಸರ್ಕಲ್​ಗೆ ಕರೆದೊಯ್ದಿದ್ದರು. ಡೇರಿ ಸರ್ಕಲ್ ಬಳಿ ಫ್ಲೈಓವರ್​ನಲ್ಲಿ ವಾಹನ ನಿಲ್ಲಿಸಿ, ವಾಹನದಲ್ಲಿದ್ದ ಹಣವನ್ನು ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದರು. 

    ಪ್ರಕರಣ ಹಿನ್ನೆಲೆ ಬೆಂಗಳೂರಿನಾದ್ಯಂತ ನಾಕಾಬಂದಿ ಹಾಕಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿತ್ತು. ಇಬ್ಬರು ಹೆಚ್ಚುವರಿ ಪೊಲೀಸ್ ಮತ್ತು ಡಿಸಿಪಿಯಿಂದ ತನಿಖೆ ನಡೆಯುತ್ತಿದ್ದು, ಮೇಲ್ನೋಟಕ್ಕೆ ಸಿಎಂಎಸ್ ಸಿಬ್ಬಂದಿಯ ಮೇಲೂ ಅನುಮಾನವಿದೆ. ಘಟನೆ ನಡೆದ ಬಳಿಕ ತಡವಾಗಿ ಮಾಹಿತಿ ನೀಡಿದ್ದರು. ಅವರ ಬಳಿ ಇದ್ದ ಗನ್ ಯಾಕೆ ಬಳಕೆ ಮಾಡಿಲ್ಲ ಎನ್ನುವ ಪ್ರಶ್ನೆ ಇತ್ತು. ಈ ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದ್ದು, ಸದ್ಯ ಚಾಲಕ, ಇಬ್ಬರು ಗನ್‌ಮೆನ್ ಗಳು ಹಾಗೂ ಓರ್ವ ಹಣ ಡೆಪಾಸಿಟ್ ಮಾಡುವ ಸಿಬ್ಬಂದಿಯನ್ನು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ.

Recent Articles

spot_img

Related Stories

Share via
Copy link