ನವದೆಹಲಿ :
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ಶನಿವಾರದಿಂದ (ನ.22) ಶುರುವಾಗಲಿದೆ. ಗುವಾಹಟಿಯ ಬರ್ಸಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಿಂದ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಹೊರಗುಳಿದಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದ ವೇಳೆ ಗಿಲ್ ಅವರು ಕುತ್ತಿಗೆ ನೋವಿಗೀಡಾಗಿದ್ದರು. ಹೀಗಾಗಿ ಅವರು ದ್ವಿತೀಯ ಇನಿಂಗ್ಸ್ನಲ್ಲಿ ಕಣಕ್ಕಿಳಿದಿರಲಿಲ್ಲ.
ಇದೀಗ ಚಿಕಿತ್ಸೆ ಪಡೆದಿರುವ ಶುಭ್ಮನ್ ಗಿಲ್ಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ದ್ಚಿತೀಯ ಟೆಸ್ಟ್ನಿಂದ ಹೊರಗುಳಿದಿದ್ದಾರೆ. ಶುಭ್ಮನ್ ಗಿಲ್ ಅನುಪಸ್ಥಿತಿಯಲ್ಲಿ ದ್ವಿತೀಯ ಟೆಸ್ಟ್ನಲ್ಲಿ ಭಾರತ ತಂಡವನ್ನು ಉಪನಾಯಕ ರಿಷಭ್ ಪಂತ್ ಮುನ್ನಡೆಸಲಿದ್ದಾರೆ. ಅದರಲ್ಲೂ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದ್ದು, ಸರಣಿಯನ್ನು ಸಮಬಲಗೊಳಿಸಲು ಭಾರತ ತಂಡ ಗೆಲ್ಲಲೇಬೇಕು. ಹೀಗಾಗಿ ಈ ಮ್ಯಾಚ್ ರಿಷಭ್ ಪಂತ್ ಪಾಲಿಗೆ ಅಗ್ನಿಪರೀಕ್ಷೆ ಎಂದರೂ ತಪ್ಪಾಗಲಾರದು. ಶುಭ್ಮನ್ ಗಿಲ್ ಹೊರಗುಳಿದಿರುವ ಕಾರಣ ದ್ವಿತೀಯ ಪಂದ್ಯದ ವೇಳೆ ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಕಂಡು ಬರುವುದು ಖಚಿತ .
ಈ ಬದಲಾವಣೆಯಿಂದಾಗಿ ಯಾರಿಗೆ ಚಾನ್ಸ್ ಸಿಗಲಿದೆ ಎಂಬುದೇ ಈ ದೊಡ್ಡ ಪ್ರಶ್ನೆ. ಏಕೆಂದರೆ ಕಳೆದ ಮ್ಯಾಚ್ ವೇಳೆ ದೇವದತ್ ಪಡಿಕ್ಕಲ್ ಹಾಗೂ ಸಾಯಿ ಸುದರ್ಶನ್ ಬೆಂಚ್ ಕಾದಿದ್ದರು. ಇದೀಗ ನಿತೀಶ್ ಕುಮಾರ್ ರೆಡ್ಡಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಈ ಮೂವರಲ್ಲಿ ಒಬ್ಬರಿಗೆ ಚಾನ್ಸ್ ಸಿಗುವುದು ಖಚಿತ.ಇಲ್ಲಿ ಟೀಮ್ ಇಂಡಿಯಾ ಪರಿಪೂರ್ಣ ಬ್ಯಾಟರ್ನನ್ನು ಕಣಕ್ಕಿಳಿಸಲು ಬಯಸಿದರೆ ಸಾಯಿ ಸುದರ್ಶನ್ ಅಥವಾ ದೇವದತ್ ಪಡಿಕ್ಕಲ್ಗೆ ಚಾನ್ಸ್ ಸಿಗಬಹುದು.ಇನ್ನು ಆಲ್ರೌಂಡರ್ಗೆ ಮಣೆಹಾಕಲು ಮುಂದಾದರೆ ಮಾತ್ರ ನಿತೀಶ್ ಕುಮಾರ್ ರೆಡ್ಡಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…
ಭಾರತ ಸಂಭಾವ್ಯ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಯಶಸ್ವಿ ಜೈಸ್ವಾಲ್, ವಾಷಿಂಗ್ಟನ್ ಸುಂದರ್ , ಸಾಯಿ ಸುದರ್ಶನ್, ರಿಷಭ್ ಪಂತ್ (ನಾಯಕ) , ರವೀಂದ್ರ ಜಡೇಜಾ , ಧ್ರುವ್ ಜುರೆಲ್ , ಅಕ್ಷರ್ ಪಟೇಲ್ , ಕುಲ್ದೀಪ್ ಯಾದವ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್.
ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಆಕಾಶ್ ದೀಪ್, ನಿತೀಶ್ ಕುಮಾರ್ ರೆಡ್ಡಿ.








