ಬಳ್ಳಾರಿ:
ಬಳ್ಳಾರಿಯಲ್ಲಿ 36 ಜೀನ್ಸ್ ಬಟ್ಟೆ ತೊಳೆಯುವ ಘಟಕಗಳನ್ನು ಮುಚ್ಚುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮವು ರಾಜಕೀಯ ತಿಕ್ಕಾಟಕ್ಕೆ ಎಡೆಮಾಡಿಕೊಟ್ಟಿದೆ.ಕೆಎಸ್ಪಿಸಿಬಿ ಕ್ರಮದಿಂದ ಸಾವಿರಾರು ಕಾರ್ಮಿಕರು ಹಾಗೂ ಸಂಸ್ಥೆಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆಂದು ಬಿಜೆಪಿ ಕಿಡಿಕಾರಿದೆ.
ಈ ನಡುವೆ ಬಳ್ಳಾರಿ ಸಂಸದ, ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಸ್ಯೆಯನ್ನು ಪರಿಹರಿಸುವುದಾಗಿ ಮತ್ತು ಎರಡು ವಾರಗಳ ಹಿಂದೆ ಮುಚ್ಚಲಾದ ಎಲ್ಲಾ 36 ಜೀನ್ಸ್ ಬಟ್ಟೆ ತೊಳೆಯುವ ಘಟಕಗಳನ್ನು ಪುನಃ ತೆರೆಯುವ ಭರವಸೆ ನೀಡಿದ್ದಾರೆ.
ಜೀನ್ಸ್ ಬಟ್ಟೆ ತೊಳೆಯುವ ಘಟಕಗಳ ಸಂಘದ ಕಾರ್ಯದರ್ಶಿ ಮಾತನಾಡಿ, ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಸಿಎಂ 22 ಕೋಟಿ ರೂ.ಗಳನ್ನು ಅನುಮೋದಿಸಿದ್ದಾರೆ. ಇದನ್ನು ಸಂಘವು ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.ಬಳ್ಳಾರಿ ನಗರ ಶಾಸಕ ನರ ಭರತ್ ರೆಡ್ಡಿ ಅವರು ಮಾತನಾಡಿ ಬಿಜೆಪಿ ತಪ್ಪು ಮಾಹಿತಿಯನ್ನು ಹರಡುತ್ತಿದೆ. ಜಿಲ್ಲೆಯ ಜವಳಿ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಳ್ಳಾರಿಯನ್ನು ಭಾರತದ ಜೀನ್ಸ್ ರಾಜಧಾನಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಜವಳಿ ಪಾರ್ಕ್ ಅನ್ನು ಉದ್ಘಾಟಿಸಲಿದ್ದಾರೆ. ಬಳ್ಳಾರಿಗೆ ಅರ್ಹವಾದ ಎಲ್ಲಾ ಮೂಲಸೌಕರ್ಯಗಳು ದೊರೆಯಲಿವೆ ಎಂದು ತಿಳಿಸಿದ್ದಾರೆ. ಜೀನ್ಸ್ ಪಾರ್ಕ್ನ ಶಿಲಾನ್ಯಾಸ ಸಮಾರಂಭವು 2026 ರ ಜನವರಿ ಮತ್ತು ಮಾರ್ಚ್ ನಡುವೆ ನಡೆಯಲಿದೆ. ಈ ಪ್ರದೇಶದಲ್ಲಿ ಶೀಘ್ರದಲ್ಲೇ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣವಾಗಲಿದ್ದು, ಇದು ದೇಶದ ಅತ್ಯಂತ ಮುಂದುವರಿದ ಘಟಕಗಳಲ್ಲಿ ಒಂದಾಗಲಿದೆ. ಉದ್ಯಮಿಗಳಿಗೆ ನಿವೇಶನ ಹಂಚಿಕೆಯನ್ನು ಮಾಜಿ ಸಚಿವ ನಾಗೇಂದ್ರ ಅವರ ಸಮನ್ವಯದೊಂದಿಗೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈಗಾಗಲೇ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿರುವ ಕೈಗಾರಿಕಾ ಪ್ರದೇಶದಲ್ಲಿನ ಜೀನ್ಸ್ ತೊಳೆಯುವ ಘಟಕಗಳು ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.ಮಾಜಿ ಬಿಜೆಪಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು, ಡೆನಿಮ್-ವಾಷಿಂಗ್ ವಲಯವನ್ನು ಬೆಂಬಲಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿರುವುದೇ ಈ ಬಿಕ್ಕಟ್ಟಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಿರ್ಲಕ್ಷ್ಯದಿಂದಾಗಿ, ಉದ್ಯಮ ಕುಸಿಯುತ್ತಿದೆ. ರಾಹುಲ್ ಗಾಂಧಿ ಬಳ್ಳಾರಿಯನ್ನು ಜೀನ್ಸ್ ರಾಜಧಾನಿಯನ್ನಾಗಿ ಮಾಡುವ ಬಗ್ಗೆ ಮಾತನಾಡುತ್ತಾರೆ, ಆದರೆ, ಅವರ ಕಾರ್ಯಗಳು ಬೇರೆಯದೇ ಕಥೆಯನ್ನು ಹೇಳುತ್ತವೆ ಎಂದು ಕಿಡಿಕಾರಿದ್ದಾರೆ.ಬಿಜೆಪಿ ಹಾಗೂ ಕಾಂಗ್ರೆಸ್ ಕೆಸರೆರಚಾಟ ನಡೆಸುತ್ತಿರುವ ನಡುವಲ್ಲೇ ಎರಡೂ ಪಕ್ಷಗಳ ವಿರುದ್ಧ ಹಲವಾರು ಜೀನ್ಸ್ ವಾಷಿಂಗ್ ಘಟಕದ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದು, ಬಳ್ಳಾರಿಯನ್ನು ಭಾರತದ ಜೀನ್ಸ್ ರಾಜಧಾನಿಯನ್ನಾಗಿ ಪರಿವರ್ತಿಸುವ ಗುರಿ ವಾಸ್ತವವಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.








