ಸಿಎಂ ಕುರ್ಚಿಗಾಗಿ ಗುದ್ದಾಟ: ಸಚಿವ ಸ್ಥಾನಕ್ಕೆ ಕೋಟಿಗಟ್ಟಲೆ ಡೀಲ್ : ಛಲವಾದಿ ನಾರಾಯಣ ಸ್ವಾಮಿ ಆರೋಪ?

ಬೆಂಗಳೂರು: 

   ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣದ ನಡುವಣ ಗುದ್ದಾಟ ತೀವ್ರವಾಗಿರುವಂತೆಯೇ ಇದೀಗ ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರದ ಮಾತುಗಳು ಕೇಳಿಬರುತ್ತಿದೆ.

   ಮಂತ್ರಿ ಸ್ಥಾನಕ್ಕಾಗಿ ಕೋಟಿಗಟ್ಟಲೇ ಡೀಲ್ ಮಾಡಲಾಗುತ್ತಿದೆ. ಒಬ್ಬ ಶಾಸಕರಿಗೆ ರೂ.50 ಕೋಟಿ ಬೆಲೆ ನಿಗದಿಯಾಗಿದೆ ಎಂಬ ಮಾಹಿತಿ ಹೊರಬಂದಿದೆ. ಅದೇ ರೀತಿ, ಸಚಿವ ಸ್ಥಾನಕ್ಕಾಗಿ ₹200 ಕೋಟಿ ರೂಪಾಯಿ ದರ ನಿಗದಿಯಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಮೊದಲು ರೂ. 50 ಕೋಟಿ, ನಂತರ 75 ರಿಂದ 100 ಕೋಟಿ ರೂಪಾಯಿ ನೀಡಿ ಶಾಸಕರನ್ನು ಖರೀದಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

   ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಛಲವಾದಿ ನಾರಾಯಣಸ್ವಾಮಿ, ತಮ್ಮದೇ ಪಕ್ಷದ ಶಾಸಕರನ್ನು ಖರೀದಿಸುವ ಸ್ಥಿತಿ ಕಾಂಗ್ರೆಸ್‌ ಪಕ್ಷಕ್ಕೆ ಬಂದಿರುವುದು ನಿಜಕ್ಕೂ ರಾಜಕೀಯದ ಅತ್ಯಂತ ವಿಚಿತ್ರ ವಿಪರ್ಯಾಸ. ಮಾತಿನಲ್ಲಿ ಮಾತ್ರ ನೀತಿ-ನೈತಿಕತೆ ಬೋಧಿಸುವ ಪಕ್ಷವೇ ಇಂದು ತನ್ನ ಅಂತರಾಳದ ಅಧಿಕಾರದ ಸಂಕಷ್ಟವನ್ನು ಹಣದ ದಂಧೆಯಿಂದ ನಿಭಾಯಿಸುವ ಪರಿಸ್ಥಿತಿಗೆ ಇಳಿದಿದೆ ಎಂಬುದು ದುರ್ಘಟನೆಗೂ ಸಮಾನ ಎಂದಿದ್ದಾರೆ.ಇದು ಕಾಂಗ್ರೆಸ್ ಪಕ್ಷದ ಆಡಳಿತದ ದೌರ್ಬಲ್ಯವನ್ನೂ, ನಾಯಕರ ಮೇಲಿನ ವಿಶ್ವಾಸದ ಸಂಕಷ್ಟವನ್ನೂ ಸ್ಪಷ್ಟವಾಗಿ ಬಿಚ್ಚಿಡುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮಾತಿನಲ್ಲಿ ಮಾತ್ರ ಮುಂದಿಡುವ ಕಾಂಗ್ರೆಸ್‌, ಕಾರ್ಯದಲ್ಲಿ ಹೇಗೆ ಕುಸಿತದ ಹಾದಿಯಲ್ಲಿ ಸಾಗುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಟೀಕಿಸಿದ್ದಾರೆ.

   ಕಾಂಗ್ರೆಸ್‌ ಪಕ್ಷದಲ್ಲೇ ನಾಲ್ಕೈದು ಪಕ್ಷಗಳಿದ್ದು, ಸಿಎಂ ಪಕ್ಷ ಹಾಗೂ ಡಿಸಿಎಂ ಪಕ್ಷ ಎಂಬಂತೆ ಎರಡು ದೊಡ್ಡ ಗುಂಪು ಸೃಷ್ಟಿಯಾಗಿವೆ. ಎರಡೂ ಗುಂಪುಗಳು ಪರಸ್ಪರ ಗುಂಪಿನಲ್ಲಿರುವ ಕೆಲವರ ಖರೀದಿಗೆ ಎದುರು ನೋಡುತ್ತಿವೆ. ಈ ಕುದುರೆ ವ್ಯಾಪಾರದ ಬಗ್ಗೆ ತನಿಖೆಯಾಗಬೇಕಿದ್ದು, ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಪತ್ರ ಬರೆಯಲಿದ್ದೇನೆ. ರಾಜ್ಯ ಕಾಂಗ್ರೆಸ್‌ ಸರಕಾರದಲ್ಲಿನ ಕಿತ್ತಾಟ, ಅಸ್ಥಿರತೆ ವಿಚಾರವಾಗಿ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಅವರು ಹೇಳಿದ್ದಾರೆ. 

    ಇಂತಹ ಮಾತುಗಳು ಜನರಲ್ಲಿ ಗಂಭೀರ ಅನುಮಾನ ಉಂಟುಮಾಡಿವೆ. ಜನರ ಸೇವೆ ಮಾಡಬೇಕಾದವರು ಈ ರೀತಿ ಖರೀದಿ–ಮಾರಾಟದ ರಾಜಕೀಯಕ್ಕೆ ಇಳಿದಿರುವುದು ತುಂಬಾ ಶೋಚನೀಯ. ಇಂತಹ ಘಟನೆಗಳು ಪ್ರಜಾಪ್ರಭುತ್ವಕ್ಕೆ ಒಳ್ಳೆಯದೇ ಅಲ್ಲ ಎಂದು ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link