ಬೆಂಗಳೂರು:
ರಾಜ್ಯದಲ್ಲಿ ಸಿಎಂ ಗದ್ದುಗೆಗಾಗಿ ಗುದ್ದಾಟ ಹೆಚ್ಚಾಗುತ್ತಿರುವಂತೆಯೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತರಾದ ಕೆಲ ಕಾಂಗ್ರೆಸ್ ಶಾಸಕರ ಮೂರನೇ ಬ್ಯಾಚ್ ಹೈಕಮಾಂಡ್ ಮೇಲೆ ಒತ್ತಡ ಹಾಕಲು ರಾತ್ರೋರಾತ್ರಿ ದೆಹಲಿ ತಲುಪಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದಂತೆಯೇ ಕೆಲವು ದಿನಗಳಿಂದ ಚರ್ಚೆಯಾಗುತ್ತಿದ್ದ ಅಧಿಕಾರ ಹಂಚಿಕೆ ವಿವಾದ ಬಗೆಹರಿಸಲು ವರಿಷ್ಠರ ಮೇಲೆ ಹೊಸ ಒತ್ತಡ ಹೇರಲು ಎರಡು ಬ್ಯಾಚ್ ಶಾಸಕರು ಕಳೆದ ವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈಗ ಎರಡನೇ ಮೂರನೇ ಬ್ಯಾಚ್ ಕಾಂಗ್ರೆಸ್ ಹೈಕಮಾಂಡ್ ಜೊತೆ ತುರ್ತು ಸಭೆ ನಡೆಸಲು ರಾಷ್ಟ್ರ ರಾಜಧಾನಿಗೆ ತೆರಳಿದೆ.
ಆರರಿಂದ ಎಂಟು ಶಾಸಕರು ನಿನ್ನೆ ತಡರಾತ್ರಿ ರಾಜಧಾನಿಗೆ ಬಂದಿಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ ದೆಹಲಿಗೆ ಪ್ರಯಾಣಿಸುವ ನಿರೀಕ್ಷೆಯಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿಯೇ ಉಳಿದಿದ್ದಾರೆ.








