ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟ, ದಿಲ್ಲಿ ತಲುಪಿದ ಹೊಗೆ……!

ನವದೆಹಲಿ

     ಆಫ್ರಿಕಾದ ಇಥಿಯೋಪಿಯಾದಲ್ಲಿ  ಜ್ವಾಲಾಮುಖಿಯೊಂದು ಸ್ಫೋಟಗೊಂಡಿದ್ದು, ಇದರ ಬೂದಿ ಮಿಶ್ರಿತ ಹೊಗೆಯು ಉತ್ತರ ಭಾರತದತ್ತ  ಬರುತ್ತಿದೆ. ಪರಿಣಾಮ ವಿಮಾನಗಳ ಹಾರಾಟಕ್ಕೆ ಅಡ್ಡಿಯುಂಟಾಗಿದೆ. ಹೀಗಾಗಿ ಹಲವು ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ  ಎಂದು ತಿಳಿದುಬಂದಿದೆ.

     ಹೈಲಿ ಗುಬ್ಬಿ ಎಂಬ ಹೆಸರಿನ ಜ್ವಾಲಾ ಮುಖಿಯು ಇಥಿಯೋಪಿಯಾದ ಅಫಾರ್ ಪ್ರಾಂತ್ಯದಲ್ಲಿ ಸಿಡಿದಿದೆ. ಇದರ ಸ್ಪೋಟದ ತೀವ್ರತೆಗೆ ಆಸುಪಾಸಿನ ಊರುಗಳಲ್ಲಿ ಕಂಪನದ ಅನುಭವವಾಗಿದೆ. ಜ್ವಾಲಾಮುಖಿಯ ಬೂದಿ ಮಿಶ್ರಿತ ಹೊಗೆಯು ಭೂತಾನ್‌ಗೂ ವ್ಯಾಪಿಸಲಿದ್ದು, ಹಿಮಾಲಯ ದವರೆಗೆ ಹೋಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಬೂದಿ ಹೊಗೆಯಿಂದಾಗಿ ಆಗಸದಲ್ಲಿ ಗೋಚರತೆ ಕಡಿಮೆಯಾಗಿದ್ದು, ಇದು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ದೆಹಲಿ-ಎನ್‌ಸಿಆರ್ ಮತ್ತು ಪಂಜಾಬ್‌ನಾದ್ಯಂತ ವಾಯು ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಈಗಾಗಲೇ ಹದಗೆಟ್ಟಿರುವ ದೆಹಲಿ ಮತ್ತು ಎನ್‌ಸಿಆರ್ ಗಾಳಿ ಗುಣಮಟ್ಟ ಇನ್ನಷ್ಟು ಕುಸಿವ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಭಾರತದ ಹಲವು ವಿಮಾನಗಳು ಕೊಲ್ಲಿ ರಾಷ್ಟ್ರಗಳಿಗೆ ಸೇವೆಯನ್ನು ರದ್ದುಗೊಳಿಸಿವೆ.

    ಜ್ವಾಲಾಮುಖಿಯ ಹೊಗೆಯು ಅಫಾರ್ ಪ್ರಾಂತ್ಯದ ಒಂದು ಸಂಪೂರ್ಣ ಗ್ರಾಮವನ್ನೇ ಆಹುತಿ ಪಡೆದುಕೊಂಡಿದೆ. ಮುಂದುವರಿದು ಕೆಂಪು ಸಮುದ್ರ ದಾಟಿ, ಪಕ್ಕದ ಯೆಮೆನ್, ಒಮಾನ್ ಮತ್ತು ಅರಬ್ಬಿ ಸಮುದ್ರವನ್ನು ಕ್ರಮಿಸಲಿದೆ. ಹಾಗೆ ಕರಾಚಿ, ಗುಜರಾತ್ ಮೂಲಕ ಭಾರತಕ್ಕೆ ಪ್ರವೇಶಿಸಲಿದೆ. ಬಳಿಕ ದೆಹಲಿ ಹರ್ಯಾಣ, ಉತ್ತರ ಪ್ರದೇಶ ಮೂಲಕ ಬಿಹಾರ, ಭೂತಾನ್ ಪ್ರವೇಶಿಸಿ ಅಸಾಂ ಮೂಲಕ ಹಿಮಾಲಯದವರೆಗೆ ಹೋಗಲಿದೆ ಎಂದು ಅಂದಾಜಿಸಲಾಗಿದೆ. 

    ಬೂದಿ ಹೊಗೆಯ ಕಾರಣ ವಿಮಾನಯಾನ ಕಂಪನಿಗಳು ಕೊಲ್ಲಿ ದೇಶಗಳಿಗೆ ವಿಮಾನ ರದ್ದುಗೊಳಿಸಿವೆ. ಜೊತೆಗೆ ಡಿಜಿಸಿಎ ವಿಮಾನ ನಿಲ್ದಾಣದ ಮುನ್ನೆಚ್ಚರಿಕೆ ನೀಡಿದೆ.ಡಿಜಿಸಿಎ ಸಲಹೆಯ ನಂತರ, ಏರ್ ಇಂಡಿಯಾ ಸೋಮವಾರ ಎಕ್ಸ್‌ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ, ಕೆಲವು ಭೌಗೋಳಿಕ ಪ್ರದೇಶಗಳಲ್ಲಿ ಬೂದಿಹೊಗೆ ಕಂಡು ಬರುತ್ತಿದ್ದು, ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ನಮ್ಮ ಕಾರ್ಯಾಚರಣಾ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಈ ಸಮಯದಲ್ಲಿ ಏರ್ ಇಂಡಿಯಾ ವಿಮಾನಗಳ ಮೇಲೆ ಯಾವುದೇ ಪ್ರಮುಖ ಪರಿಣಾಮವಿಲ್ಲ.

     ನಮ್ಮ ಪ್ರಯಾಣಿಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆಗಳೊಂದಿಗೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ಇದು ನಮ್ಮ ಪ್ರಮುಖ ಆದ್ಯತೆಯಾಗಿದೆ. ನಮ್ಮ ಪ್ರಯಾಣಿಕರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆʼ ಎಂದು ಹೇಳಿದೆ.

Recent Articles

spot_img

Related Stories

Share via
Copy link