ನವದೆಹಲಿ :
53 ನೇ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಗಳನ್ನು ಮಂಗಳವಾರ ನ್ಯೂಯಾರ್ಕ್ನಲ್ಲಿ ಪ್ರದಾನ ಮಾಡಲಾಗಿದೆ. ಅಂತಾರಾಷ್ಟ್ರೀಯ ಟೆಲಿವಿಷನ್ ಅಕಾಡೆಮಿ ಆಫ್ ಟೆಲಿವಿಷನ್ ಆರ್ಟ್ಸ್ & ಸೈನ್ಸಸ್ ನೀಡುವ ವಾರ್ಷಿಕ ಪ್ರಶಸ್ತಿಗಳು ಇದಾಗಿದ್ದು, ಕೆಲ್ಲಿ ರಿಪಾ ಮತ್ತು ಮಾರ್ಕ್ ಕಾನ್ಸುಲೋಸ್ ಆಯೋಜಿಸಿದ್ದರು. ಪ್ರಪಂಚದಾದ್ಯಂತ ಬಿಡುಗಡೆಗೊಂಡ ಅತ್ಯುತ್ತಮ ಟಿವಿ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳನ್ನು 16 ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬಾಲಿವುಡ್ನ ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾ ಕೂಡ ಎರಡು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು.
ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾವು ಕಳೆದ ವರ್ಷ ಒಟಿಟಿಯಲ್ಲಿ ನೇರವಾಗಿ ತೆರೆಕಂಡಿತ್ತು. ಇದೊಂದು ಬಯೋಪಿಕ್ ಆಗಿದ್ದು, ಅಮರ್ ಸಿಂಗ್ ಚಮ್ಕಿಲಾ ಅವರ ಪಾತ್ರದಲ್ಲಿ ನಟ ದಿಲ್ಜಿತ್ ದೊಸಾಂಜ್ ಕಾಣಿಸಿಕೊಂಡಿದ್ದರು. 27ನೇ ವಯಸ್ಸಿಗೆ ನಿಧನರಾದ ಅಮರ್ ಸಿಂಗ್ ಚಮ್ಕಿಲಾ ಅವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ್ದರು. ಅವರ ಪಾತ್ರವನ್ನು ಮಾಡಿದ್ದಕ್ಕಾಗಿ ಎಮ್ಮಿ ಪ್ರಶಸ್ತಿ ಪಟ್ಟಿಯಲ್ಲಿ ದಿಲ್ಜಿತ್ ದೊಸಾಂಜ್ ಅವರು ಅತ್ಯುತ್ತಮ ನಟ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದರು. ಆದರೆ ಅವರಿಗೆ ಪ್ರಶಸ್ತಿ ಲಭಿಸಿಲ್ಲ. ಅತ್ಯುತ್ತಮ ಟಿವಿ ಸಿನಿಮಾ ಎಂಬ ವಿಭಾಗದಲ್ಲೂ ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾ ನಾಮ ನಿರ್ದೇಶನಗೊಂಡಿತ್ತು. ಆದರೆ ಪ್ರಶಸ್ತಿ ಲಭಿಸಿಲ್ಲ. ಅಂದಹಾಗೆ, ಈಚೆಗೆ ತೆರೆಕಂಡು ಸೂಪರ್ ಹಿಟ್ ಆಗಿದ್ದ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಹಿಂದಿ ವರ್ಷನ್ನ ಪ್ರಮೋಷನ್ ಹಾಡಿನಲ್ಲಿ ದಿಲ್ಜಿತ್ ಕಾಣಿಸಿಕೊಂಡಿದ್ದರು.








