ಮುರುಘಾ ಮಠದ ಶರಣರ ವಿರುದ್ಧದ ಪೋಕ್ಸೋ ಕೇಸ್‌ ತೀರ್ಪು ಇಂದು

ಚಿತ್ರದುರ್ಗ

    ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ  ಪ್ರಕರಣಕ್ಕೆ ಸಂಬಂಧಪಟ್ಟಂತೆ, ಚಿತ್ರದುರ್ಗದ  ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ  ವಿರುದ್ಧ ದಾಖಲಾಗಿರುವ ಮೊದಲ ಪೋಕ್ಸೊ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್‌ ಕೋರ್ಟ್‌ ಇಂದು ಅಂತಿಮ ತೀರ್ಪು  ಪ್ರಕಟಿಸಲಿದೆ. ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದ್ದು, ನ್ಯಾಯಮೂರ್ತಿ ಗಂಗಾಧರಪ್ಪ ಚೆನ್ನಬಸಪ್ಪ ಹಡಪದ ತೀರ್ಪು ಪ್ರಕಟಿಸಲಿದ್ದಾರೆ.

   ಇಂದು ಬೆಳಗ್ಗೆ 11:30ಕ್ಕೆ ಸ್ವಾಮೀಜಿ ವಿರುದ್ಧದ ಮೊದಲ ಪೋಕ್ಸೊ ಪ್ರಕರಣದ ತೀರ್ಪು ಪ್ರಕಟವಾಗಲಿದೆ. ಆರೋಪ ಸಾಬೀತಾದರೆ ಕನಿಷ್ಠ 20 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮುರುಘಾ ಶರಣರ ಪ್ರಕರಣದ ವಾದ-ಪ್ರತಿವಾದ ಪೂರ್ಣಗೊಂಡಿದೆ. ಶರಣರ ವಿರುದ್ಧದ ಎರಡು ಪೋಕ್ಸೊ ಪ್ರಕರಣಗಳ ಪೈಕಿ ಮೊದಲ ಪ್ರಕರಣದ ಸುದೀರ್ಘ ವಿಚಾರಣೆ ನಡೆದಿದ್ದು, ವಾದ ಆಲಿಸಿದ ನ್ಯಾಯಾಲಯ ಇಂದು ಪ್ರಕರಣದ ತೀರ್ಪನ್ನು ಪ್ರಕಟಿಸುವುದಾಗಿ ತಿಳಿಸಿದೆ.

   ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2022ರ ಆ.26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದ್ದು, ಮುರುಘಾ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಂದ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎ1 ಮುರುಘಾಶ್ರೀ, ಎ2 ಲೇಡಿ ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ ವಿರುದ್ಧ ಕೇಸ್ ದಾಖಲಾಗಿತ್ತು.

  ಅದೇ ವರ್ಷ ಆ.27ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆಯಾಗಿದ್ದು, 2022ರ ಸೆ.01 ರಂದು ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ ಬಂಧನಕ್ಕೊಳಗಾಗಿದ್ದರು. ಬಳಿಕ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮುರುಘಾಶ್ರೀ ವಿರುದ್ಧ 2022ರ ಅ.13 ರಂದು ಮಠದ ಅಡುಗೆ ಸಹಾಯಕಿಯಿಂದ ಮತ್ತೊಂದು ದೂರು ದಾಖಲಾಗಿತ್ತು. ಆ ಕೇಸಲ್ಲಿ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆಯೂ ಲೈಂಗಿಕ ಕಿರುಕುಳ ನೀಡಿರುವುದಾಗಿಯೂ ಎಂದು ಕೂಡ ಉಲ್ಲೇಖಿಸಿದ್ದರು.

   ಈ ವೇಳೆ ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ, ಎ6 ಮುರುಘಾಶ್ರೀ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ದ ಕೇಸ್ ದಾಖಲಾಗಿದ್ದು, ಸಂಪೂರ್ಣ ತನಿಖೆ ನಡೆಸಿದ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಹಾಗೂ ಚಿತ್ರದುರ್ಗ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದ ತಂಡವು 2022ರ ಅ.27 ರಂದು 694 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಅದರಲ್ಲಿ 347 ಪುಟಗಳ ಎ ಮತ್ತು ಬಿ ಎಂದು ಎರಡು ಸೆಟ್ ಚಾರ್ಜ್ ಶೀಟ್ ಸಲ್ಲಿಸಿದ್ದರು.

   ಇನ್ನೂ 2023ರ ಜ.10ಕ್ಕೆ ದಾಖಲಾದ 2ನೇ ಪೋಕ್ಸೊ ಪ್ರಕರಣದಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು 761 ಪುಟಗಳ ಚಾರ್ಜ್‌ಶೀಟ್‌ನ್ನು ಸಲ್ಲಿಸಿದ್ದರು. ಇಷ್ಟೆಲ್ಲ ಸಾಕ್ಷ್ಯಾಧಾರ ಹಾಗೂ ಚಾರ್ಜ್‌ಶೀಟ್‌ ಮೇಲೆ ಚಿತ್ರದುರ್ಗ ನ್ಯಾಯಾಲಯ ವಿಚಾರಣೆ ನಡೆಸಿತ್ತು. ವಿಚಾರಣೆ ನಡಯುವಾಗಲೇ 2023ರ ನ.8 ರಂದು ಹೈಕೋರ್ಟ್ ನಿಂದ ಮುರುಘಾಶ್ರೀಗೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ನ.16ರಿಂದು ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ಬಿಡುಗಡೆಯಾಗಿದ್ದರು.

   2ನೇ ಪೋಕ್ಸೋ ಕೇಸಿನಲ್ಲಿ ಜಾಮೀನು ಪಡೆಯದ ಹಿನ್ನೆಲೆಯಲ್ಲಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹಿನ್ನೆಲೆ ಪುನಃ ನ.20ರಂದು ಮಧ್ಯಾಹ್ನ ಮುರುಘಾಶ್ರೀ ಮತ್ತೆ ಬಂಧನಕ್ಕೊಳಗಾದರು. ಬಳಿಕ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಆಗ ನ.20 ಸಂಜೆ ವೇಳೆಗೆ ಹೈಕೋರ್ಟ್ ಸೂಚನೆ ಮೇರೆಗೆ ಅಂದು ಬಿಡುಗಡೆ ಭಾಗ್ಯ ಸಿಕ್ಕಿತ್ತು.

   ಆಗ ಸಂತ್ರಸ್ತೆಯರು ಮುರುಘಾಶ್ರೀಗಳ ಜಾಮೀನು ರದ್ದತಿ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಮುಖ್ಯ ಸಾಕ್ಷ ವಿಚಾರಣೆ ಪೂರ್ಣ ಆಗುವವರೆಗೆ ಮುರುಘಾಶ್ರೀ ಬಂಧನದಲ್ಲಿಡುವಂತೆ ಸುಪ್ರಿಂ ಕೋರ್ಟ್ ಆದೇಶ ಮಾಡಿತ್ತು. ಹೀಗಾಗಿ 2024ರ ಮೇ.27 ರಂದು ಕೋರ್ಟ್ ಎದುರು ಶರಣಾದ ಮುರುಘಾಶ್ರೀಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿತ್ತು. ಬಳಿಕ ಸಂತ್ರಸ್ತೆಯರಿಬ್ಬರು ಸೇರಿದಂತೆ 13 ಜನರ ಸಾಕ್ಷ ವಿಚಾರಣೆ ಅಂತ್ಯವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಮುರುಘಾಶ್ರೀಗೆ ಬಿಡುಗಡೆ ಭಾಗ್ಯ ಸಿಕ್ಕಿತ್ತು.

Recent Articles

spot_img

Related Stories

Share via
Copy link