ತಿರುಪತಿ:
ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ತಿರುಮಲ ತಿರುಪತಿ ದೇವಸ್ಥಾನಗಳು 10 ದಿನಗಳ ತಿರುಪತಿ ವೈಕುಂಠ ದರ್ಶನವನ್ನು ಘೋಷಣೆ ಮಾಡಿದೆ. ಇದಕ್ಕಾಗಿ ಟಿಟಿಡಿ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸಿದ್ದು, ಹೆಚ್ಚಿನ ಬೇಡಿಕೆಯಿರುವ ಮೊದಲ ಮೂರು ದಿನಗಳವರೆಗೆ ಎಲೆಕ್ಟ್ರಾನಿಕ್ ಡಿಪ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಡಿಸೆಂಬರ್ 30 ರಿಂದ ಜನವರಿ 8ರವರೆಗೆ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕಾಗಿರುವ ವಿಸ್ತೃತ ವ್ಯವಸ್ಥೆಗಳ ಮತ್ತು ಮಾರ್ಗಸೂಚಿಗಳನ್ನು ಟಿಟಿಡಿ ಪ್ರಕಟಿಸಿದೆ.
ಡಿಸೆಂಬರ್ 30 ರಿಂದ ಜನವರಿ 8 ರವರೆಗೆ ತಿರುಪತಿ ಶ್ರೀವಾರಿ ದೇವಾಲಯದಲ್ಲಿ ದೇವರ ದರ್ಶನಕ್ಕೆ ಟಿಟಿಡಿ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಇದಕ್ಕಾಗಿ ಹೆಚ್ಚಿನ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸಿದ್ದು, ವೈಕುಂಠ ದರ್ಶನ ಪ್ರಾರಂಭದ ಮೊದಲ ಮೂರು ದಿನಗಳವರೆಗೆ ಎಲೆಕ್ಟ್ರಾನಿಕ್ ಡಿಪ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.
ಡಿಸೆಂಬರ್ 30 ರಂದು ವೈಕುಂಠ ಏಕಾದಶಿ, ಡಿಸೆಂಬರ್ 31 ವೈಕುಂಠ ದ್ವಾದಶಿ ಮತ್ತು ಜನವರಿ 1 ಹೊಸ ವರ್ಷದ ಪ್ರಯುಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಡಿಪ್ ವ್ಯವಸ್ಥೆಯ ಮೂಲಕ ದರ್ಶನ ಟೋಕನ್ಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ.
ಟೋಕನ್ ವ್ಯವಸ್ಥೆಯಡಿಯಲ್ಲಿ ನಾಲ್ಕು ಸದಸ್ಯರಿಗೆ ಅವಕಾಶ ನೀಡುವ 1+3 ಕುಟುಂಬ ಕೋಟಾದ ಪ್ರಯೋಜನವನ್ನು ಕೂಡ ಭಕ್ತರು ಪಡೆಯಬಹುದಾಗಿದೆ. ಇದರ ಪ್ರಯೋಜನ ಪಡೆಯಲಿಚ್ಚಿಸವವರು ನವೆಂಬರ್ 27 ರಂದು ಬೆಳಗ್ಗೆ 10 ಗಂಟೆಯಿಂದ ಡಿಸೆಂಬರ್ 1ರಂದು ಸಂಜೆ 5 ಗಂಟೆಯವರೆಗೆ ಟಿಟಿಡಿ ವೆಬ್ಸೈಟ್, ಟಿಟಿಡಿ ಮೊಬೈಲ್ ಅಪ್ಲಿಕೇಶನ್ ಅಥವಾ ಎಪಿ ಸರ್ಕಾರದ ವಾಟ್ಸಾಪ್ ಬಾಟ್ ಸಂಖ್ಯೆ 9552300009ಗೆ ನೋಂದಾಯಿಸಿಕೊಳ್ಳಬಹುದು.
ಎಲೆಕ್ಟ್ರಾನಿಕ್ ಡಿಪ್ ಫಲಿತಾಂಶಗಳನ್ನು ಡಿಸೆಂಬರ್ 2 ರಂದು ಮಧ್ಯಾಹ್ನ 2 ಗಂಟೆಗೆ ಘೋಷಿಸಲಾಗುವುದು. ಉಳಿದಂತೆ ದಿನಗಳ ದರ್ಶನ ಮತ್ತು ಟಿಕೆಟ್ ಮಾರಾಟದ ವೇಳಾಪಟ್ಟಿಯನ್ನು ಕೂಡ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಜನವರಿ 2 ರಿಂದ 8 ರವರೆಗಿನ ಸರ್ವ ದರ್ಶನಕ್ಕಾಗಿ, ಸಾಮಾನ್ಯ ಭಕ್ತರು ವೈಕುಂಠಂ ಕ್ಯೂ ಕಾಂಪ್ಲೆಕ್ಸ್ -2 ಮೂಲಕ ಟೋಕನ್ ಇಲ್ಲದೆ ನೇರವಾಗಿ ಪ್ರವೇಶಿಸುವಂತೆ ಟಿಟಿಡಿ ತಿಳಿಸಿದೆ.
ಜನವರಿ 2 ರಿಂದ 8ರವರೆಗಿನ ಎಸ್ಇಡಿ ಮತ್ತು ಶ್ರೀವಾನಿ ಟಿಕೆಟ್ಗಳಿಗೆ ಡಿಸೆಂಬರ್ 5 ರಂದು ಬೆಳಗ್ಗೆ 10 ಗಂಟೆಗೆ ದಿನಕ್ಕೆ 1,000 ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ. 30 ರೂ. ನ ಎಸ್ಇಡಿ ಟಿಕೆಟ್ ಪಡೆಯುವವರಿಗಾಗಿ ಡಿಸೆಂಬರ್ 5 ರಂದು ಮಧ್ಯಾಹ್ನ 3 ಗಂಟೆಗೆ ದಿನಕ್ಕೆ 15,000 ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಟಿಟಿಡಿ ಹೇಳಿದೆ.
ತಿರುಪತಿ ವೈಕುಂಠ ದರ್ಶನದ ಪ್ರಯುಕ್ತ ಸಾಮಾನ್ಯ ಯಾತ್ರಿಕರಿಗೆ ದೇವರ ದರ್ಶನಕ್ಕೆ ಗರಿಷ್ಠ ಅವಕಾಶವನ್ನು ನೀಡುವ ಸಲುವಾಗಿ ಟಿಟಿಡಿ ಹಲವಾರು ಸವಲತ್ತುಗಳನ್ನು ರದ್ದುಗೊಳಿಸಿದೆ. ಅವುಗಳಲ್ಲಿ ಮುಖ್ಯವಾಗಿ ಡಿಸೆಂಬರ್ 30ರಿಂದ ಜನವರಿ1ರವರೆಗೆ ವಿಶೇಷ ದರ್ಶನಗಳನ್ನು ರದ್ದುಗೊಳಿಸಲಾಗಿದೆ. ಇದರಲ್ಲಿ ಶ್ರೀವಾಣಿ ದರ್ಶನ ಮತ್ತು ಇತರ ಎಲ್ಲಾ ವಿಶೇಷ ದರ್ಶನಗಳು ಸೇರಿವೆ.
ವಿಮಾನ ನಿಲ್ದಾಣ ಸೇರಿದಂತೆ ವಿವಿಧೆಡ ವಿತರಿಸಲಾಗುವ ಆಫ್ಲೈನ್ ಮೂಲಕ ಟೋಕನ್ ನೀಡುವುದನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಅಲ್ಲದೇ ತಿರುಪತಿಯಲ್ಲಿ ಎಸ್ ಎಸ್ ಡಿ ಟೋಕನ್ಗಳ ವಿತರಣೆಯನ್ನು10 ದಿನಗಳ ಅವಧಿಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.ಡಿಸೆಂಬರ್ 30 ರಿಂದ ಜನವರಿ 8 ರವರೆಗೆ ಹಿರಿಯ ನಾಗರಿಕರು, ಅಂಗವಿಕಲರು, ಶಿಶುಗಳನ್ನು ಹೊಂದಿರುವ ಪೋಷಕರು, ರಕ್ಷಣಾ ಸಿಬ್ಬಂದಿ ಮತ್ತು ಎನ್ ಆರ್ ಐ ಗಳಿಗೆ ಇರುವ ವಿಶೇಷ ಸವಲತ್ತು ದರ್ಶನಗಳನ್ನು ಕೂಡ ರದ್ದುಗೊಳಿಸಲಾಗಿದೆ.
ಸ್ವಯಂ ಪ್ರೋಟೋಕಾಲ್ ಹೊಂದಿರುವ ಗಣ್ಯರಿಗೆ ಮಾತ್ರ ವಿಐಪಿ ಬ್ರೇಕ್ ದರ್ಶನ ನೀಡಲಾಗುವುದು. ಉಳಿದಂತೆ ವಿಐಪಿ ದರ್ಶನಕ್ಕಾಗಿ ಎಲ್ಲಾ ಶಿಫಾರಸು ಪತ್ರಗಳನ್ನು ರದ್ದುಗೊಳಿಸಲಾಗಿದೆ. ಇದಕ್ಕಾಗಿ ನೀಡುವ ಅರ್ಜಿ ಸೇವೆಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಜನವರಿ 6ರಿಂದ 8ರವರೆಗೆ ತಿರುಪತಿ, ಚಂದ್ರಗಿರಿ, ರೇಣಿಗುಂಟಕ್ಕೆ ಸ್ಥಳೀಯರಿಗಿರುವ ಕೋಟಾ ದರ್ಶನ ವ್ಯವಸ್ಥೆಯಡಿ ದಿನಕ್ಕೆ 4,500 ಟೋಕನ್ಗಳು ಮತ್ತು ತಿರುಮಲಕ್ಕೆ ದಿನಕ್ಕೆ 500 ಟೋಕನ್ಗಳನ್ನು ಡಿಸೆಂಬರ್ 10 ರಂದು ಆನ್ಲೈನ್ ಮೂಲಕ ಬಿಡುಗಡೆ ಮಾಡಲಾಗುತ್ತದೆ.
1 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ದೇಣಿಗೆ ನೀಡುವ ದಾನಿಗಳು ಡಿಸೆಂಬರ್ 5 ರಂದು ಬೆಳಗ್ಗೆ 10 ಗಂಟೆಗೆ ಟಿಕೆಟ್ ಬಿಡುಗಡೆಯಾದಾಗ ದಾನಿಗಳ ಅರ್ಜಿಯ ಮೂಲಕ ಆನ್ಲೈನ್ನಲ್ಲಿ ತಮ್ಮ ದರ್ಶನ ವ್ಯವಸ್ಥೆಯನ್ನು ಬುಕ್ ಮಾಡುವಂತೆ ಟಿಟಿಡಿ ಸೂಚನೆ ನೀಡಿದೆ.








