KSCA ಚುನಾವಣೆಯಿಂದ ನಿಷೇಧ: ಹೈಕೋರ್ಟ್ ಮೊರೆ ಹೋದ ಕೆಎನ್ ಶಾಂತ ಕುಮಾರ್

ಬೆಂಗಳೂರು

     ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ  ಅಧ್ಯಕ್ಷರಾಗಿ ಮಾಜಿ ವೇಗಿ ವೆಂಕಟೇಶ್‌ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವೆನಿಸಿದೆ. ಬ್ರಿಜೇಶ್‌ ಪಟೇಲ್‌ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪತ್ರಿಕೋದ್ಯಮಿ ಕೆ.ಎನ್‌.ಶಾಂತ್‌ಕುಮಾರ್‌ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕೃತಗೊಳಿಸಿದ್ದಾರೆ. ಅಚ್ಚರಿ ಎಂದರೆ 200 ಸಬ್‌ಸ್ಕ್ರಿಷ್ಷನ್‌ ಶುಲ್ಕ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಅವರ ನಾಮಪತ್ರ ತಿರಸ್ಕೃತಗೊಂಡಿದೆ. 

    ಕೇವಲ 200 ಶುಲ್ಕ ಕಟ್ಟಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ನಾಮಪತ್ರ ತಿರಸ್ಕೃತಗೊಳಿಸಿರುವ ಚುನಾವಣಾ ಅಧಿಕಾರಿ ವಿರುದ್ಧ ಕೆಎಸ್‌ಸಿಎ ಅಧ್ಯಕ್ಷ ಹುದ್ದೆ ಆಕಾಂಕ್ಷಿ ಕೆ.ಎನ್‌.ಶಾಂತ್‌ಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಹಾಕಿದ್ದು, ಅರ್ಜಿಯು ಬುಧವಾರ ವಿಚಾರಣೆಗೆ ಬರಲಿದೆ. ಶಾಂತ್‌ಕುಮಾರ್‌ ಪ್ರತಿನಿಧಿಸುವ ಕ್ರಿಕೆಟ್‌ ಕ್ಲಬ್‌, ಲೀಗ್‌ನಲ್ಲಿ ಆಡಲು ನೋಂದಣಿ ಮಾಡಿಕೊಳ್ಳುವಾಗ 200 ಸಬ್‌ಸ್ಕ್ರಿಷ್ಷನ್‌ ಶುಲ್ಕ ಪಾವತಿಸಿರಲಿಲ್ಲ. ಈ ಕಾರಣಕ್ಕೆ ಅವರ ನಾಮಪತ್ರ ತಿರಸ್ಕೃತ ಮಾಡಲಾಗಿತ್ತು. 

    ಶುಲ್ಕ ಪಾವತಿ ಬಾಕಿ ಇರುವ ಬಗ್ಗೆ ಕೆಎಸ್‌ಸಿಎ ನೋಟಿಸ್‌ ಸಹ ನೀಡಿಲ್ಲ. ವಾರ್ಷಿಕ ಸಭೆಗೂ ಮುನ್ನ ಬಾಕಿ ಪಾವತಿಸಬೇಕು ಎನ್ನುವುದು ನಿಯಮ. ನ.30ಕ್ಕೆ ವಾರ್ಷಿಕ ಸಭೆ ಇದ್ದು, ಅದಕ್ಕೆ ಮುನ್ನ ಬಾಕಿ ಪಾವತಿಸಲು ಅವಕಾಶವಿದೆ. ಹೀಗಾಗಿ, ನಾಮಪತ್ರ ತಿರಸ್ಕೃತಗೊಳಿಸಿದ್ದು ಸರಿಯಾದ ಕ್ರಮವಲ್ಲ ಎಂದು ಶಾಂತ್‌ಕುಮಾರ್‌ ಬಣದ ಸದಸ್ಯರೊಬ್ಬರು ಹೇಳಿದ್ದಾರೆ.

    ವೆಂಕಿ ಬಣದಿಂದ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದ, ಕೆಎಸ್‌ಸಿಎ ಮಾಜಿ ಖಜಾಂಚಿ ವಿನಯ್‌ ಮೃತ್ಯುಂಜಯ ಅವರ ನಾಮಪತ್ರ ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕೃತಗೊಂಡಿದೆ. ವೆಂಕಿ ಬಣದಲ್ಲಿರುವ ಮಾಜಿ ಆಟಗಾರ್ತಿ ಕಲ್ಪನಾ ವೆಂಕಟಾಚಾರ್‌ ಕೂಡ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಅವರು ನಾಮಪತ್ರ ಹಿಂಪಡೆದಿದ್ದಾರೆ. ನಾಮಪತ್ರ ಹಿಂಪಡೆಯಲು ನ.27 ಕೊನೆ ದಿನವಾಗಿದ್ದು, ಪ್ರಸಾದ್‌ ಅವಿರೋಧ ಆಯ್ಕೆ ಬಗ್ಗೆ ಇಂದು(ಬುಧವಾರ) ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇದೆ.

    ಚುನಾವಣಾ ಮೇಲುಸ್ತುವಾರಿಯಾಗಿ ನೇಮಕಗೊಂಡಿರುವ ನಿವೃತ್ತಿ ನ್ಯಾಯಾಧೀಶ ಸುಭಾಷ್‌ ಬಿ ಅಡಿ ಅವರು, ಕೆಎಸ್‌ಸಿಎ ಸಂಸ್ಥೆಯ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಮ್ಮುಖದಲ್ಲಿ ಮಂಗಳವಾರ ನಾಮಪತ್ರಗಳನ್ನು ಪರಿಶೀಲನೆ ನಡೆಸಿದರು. ಈ ಪ್ರಕ್ರಿಯೆ ಮುಗಿದ ಬಳಿಕ ಚುನಾವಣಾಧಿಕಾರಿ ಬಿ ಬಸವರಾಜು ಅಂತಿಮ ಪಟ್ಟಿಯನ್ನು ಪ್ರಕಟಿಸಿದರು. 

    ಬೆಂಗಳೂರು ವಲಯಕ್ಕೆ ವೈ ಜಗನ್ನಾಥ್‌, ಆರ್‌ಎಸ್‌ ರಾಮಪ್ರಸಾದ್‌, ಶ್ರೀನಿವಾಸ್‌ ಮೂರ್ತಿ, ಅವಿನಾಶ್‌ ವೈದ್ಯ, ಕಲ್ಪನಾ ವೆಂಕಟಾಚಾರ್‌, ಆಶಿಶ್‌ ಅಮರ್‌ಲಾಲ್‌, ರಾಹುಲ್‌ ಬಾಪ್ನಾ, ತಿಲಕ್‌ ನಾಯ್ಡು ಅವರ ನಾಮಪತ್ರಗಳು ಸ್ವೀಕೃತಗೊಂಡಿವೆ. ಮೈಸೂರು ವಲಯಕ್ಕೆ ಹರಿ ಕೃಷ್ಣನ್‌ ಕುಮಾರ್‌, ಶ್ರನಿವಾಸ್‌ ಪ್ರಸಾದ್‌, ಶಿವಮೊಗ್ಗ ವಲಯಕ್ಕೆ ನಾಗೇಂದ್ರ ಪಂಡಿತ್‌ ಮತ್ತು ಡಿಎಸ್‌ ಅರುಣ್‌, ತಮಕೂರು ವಲಯಕ್ಕೆ ಸಿಆರ್‌ ಹರಿಶ್‌ ಮತ್ತು ಅಶೋಕ್‌, ಧಾರವಾಡ ವಲಯಕ್ಕೆ ಅಹ್ಮದ್‌ ರಾಝಾ ಮತ್ತು ಕಿತ್ತೂರು, ರಾಯಚೂರು ವಲಯಕ್ಕೆ ಕುಶಾಲ್‌ ಪಾಟೀಲ್‌ ಗಾಡಗಿ ಮತ್ತು ಪಾರ್ಥಸಾರಥಿ ಕನಕವೀಡು ಹಾಗೂ ಮಂಗಳೂರು ವಲಯಕ್ಕೆ ಶೇಖರ್‌ ಶೆಟ್ಟಿ ಅವರ ನಾಮಪತ್ರಗಳನ್ನು ಚುನಾವಣಾಧಿಕಾರಿ ಸ್ವೀಕರಿಸಿದ್ದಾರೆ.

Recent Articles

spot_img

Related Stories

Share via
Copy link