ನವದೆಹಲಿ :
ಬಾಲಿವುಡ್ನ ಕ್ಯೂಟ್ ಕಪಲ್ ಎಂದೇ ಕರೆಸಿಕೊಳ್ಳುವ ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಯು ನಾಲ್ಕು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಪೋಷಕರಾಗಿದ್ದರು. ಇದೀಗ ಈ ದಂಪತಿಯು ತಮ್ಮ ಮುದ್ದಾದ ಮಗಳಿಗೆ ನಾಮಕರಣ ಮಾಡಿದ್ದಾರೆ.
ಸರಾಯಾಹ್ (Saraayah) ಎಂಬ ಹೆಸರು ಹೀಬ್ರೂ ಭಾಷೆಯಿಂದ ಬಂದಿದ್ದು, ಇದರ ಅರ್ಥ ‘ದೈವಿಕ ರಾಜಕುಮಾರಿ’ ಅಥವಾ ʻರಾಜಕುಮಾರಿ’ ಎಂದಿದೆ. ಮಗಳ ಕಾಲು ಫೋಟೋವನ್ನು ಹಂಚಿಕೊಂಡಿರುವ ಕಿಯಾರಾ ಮತ್ತು ಸಿದ್ದಾರ್ಥ್, “ನಮ್ಮ ಪ್ರಾರ್ಥನೆಗಳಿಂದ, ನಮ್ಮ ತೋಳುಗಳವರೆಗೆ.. ನಮ್ಮ ದೈವಿಕ ಆಶೀರ್ವಾದ, ನಮ್ಮ ರಾಜಕುಮಾರಿ” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಫೋಟೋ ಹಂಚಿಕೊಂಡ ಒಂದು ಗಂಟೆಯೊಳಗೆ 6.25 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು, “ನನ್ನ ಪ್ರೀತಿ ಮತ್ತು ಆಶೀರ್ವಾದಗಳು ಯಾವಾಗಲೂ ಇರಲಿ….” ಎಂದು ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಬಾಲಿವುಡ್ನ ವರುಣ್ ಧವನ್, ಶಿಲ್ಪಾ ಶೆಟ್ಟಿ, ಆಮಿ ಜಾಕ್ಸನ್, ಭೂಮಿ ಪೆಡ್ನೇಕರ್, ಸಂಜಯ್ ಕಪೂರ್, ಆಥಿಯ ಶೆಟ್ಟಿ, ಪತ್ರಲೇಖಾ, ನಿಕಿತಿನ್ ಧೀರ್, ಮನೀಶ್ ಮಲ್ಹೋತ್ರಾ ಮುಂತಾದ ಸೆಲೆಬ್ರಿಟಿಗಳು ಶುಭ ಹಾರೈಸಿದ್ಧಾರೆ.
ನಟಿ ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ಮದೊಲು ಭೇಟಿಯಾಗಿದುದ 2018ರಲ್ಲಿ. ಆನಂತರ 2021ರಲ್ಲಿ ತೆರೆಕಂಡ ‘ಶೇರ್ಷಾಹ್’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರು ಜೋಡಿಯಾಗಿ ನಟಿಸಿದ್ದರು. ಆಗಲೇ ಇವರ ನಡುವೆ ಪ್ರೀತಿ ಚಿಗುರಿತ್ತು. ಕೆಲ ಸಮಯ ಈ ಜೋಡಿ ತಮ್ಮ ಸಂಬಂಧವನ್ನು ಹೆಚ್ಚು ಬಹಿರಂಗಪಡಿಸದೆ ಖಾಸಗಿಯಾಗಿ ಇರಿಸಿಕೊಂಡಿದ್ದರು. ಆದರೆ 2023ರ ಫೆ.7ರಂದು ರಾಜಸ್ಥಾನದ ಜೈಸಲ್ಮೇರ್ನಲ್ಲಿರುವ ಸೂರ್ಯಗಢ್ ಪ್ಯಾಲೇಸ್ನಲ್ಲಿ ಅದ್ದೂರಿಯಾಗಿ ಈ ಜೋಡಿ ಮದುವೆಯಾದರು. ಈ ವರ್ಷ ಫೆಬ್ರವರಿಯಲ್ಲಿ, “ತಮ್ಮ ಜೀವನದ ದೊಡ್ಡ ಉಡುಗೊರೆ ಶೀಘ್ರದಲ್ಲೇ ಬರಲಿದೆ” ಎಂದು ಸಿದ್ಧಾರ್ಥ್ ಮತ್ತು ಕಿಯಾರಾ ಹೇಳಿಕೊಂಡಿದ್ದರು. ಜುಲೈ 15ರಂದು ಹೆಣ್ಣು ಮಗುವಿಗೆ ಕಿಯಾರಾ ಜನ್ಮ ನೀಡಿದ್ದರು.
ಈ ವರ್ಷ ಕಿಯಾರಾ ಅಭಿನಯದ ಗೇಮ್ ಚೇಂಜರ್ ಮತ್ತು ವಾರ್ 2 ಸಿನಿಮಾಗಳು ತೆರೆಕಂಡು ಫ್ಲಾಪ್ ಎನಿಸಿಕೊಂಡಿವೆ. ಯಶ್ ಜೊತೆ ನಟಿಸಿರುವ ಟಾಕ್ಸಿಕ್ ಸಿನಿಮಾದ ಮೇಲೆ ಸದ್ಯ ಕಿಯಾರಾ ಅವರ ಗಮನ ಇದೆ. ಇನ್ನು, ಸಿದ್ದಾರ್ಥ್ ನಟನೆಯ ʻಪರಮ್ ಸುಂದರಿʼ ತೆರೆಕಂಡು ಸಾಧಾರಣ ಯಶಸ್ಸು ಕಂಡಿದೆ.








