ಹಾವೇರಿ
ನಗರದ ಸಮೀಪದಲ್ಲಿರುವ ಕನಕಾಪುರ ಗ್ರಾಮದ ಹೊಂಬರಡಿಗೆ ಕಡೆಗೆ ಹೋಗುವ ತುಂಗಭದ್ರಾ ಕಾಲುವೆ ಬಳಿ ಒಂದು ವಾರದ ಹಿಂದೆ ಚಿರತೆಯೊಂದು ಕಾಣಿಸಿಕೊಂಡ ಹಿನ್ನೆಲೆ ರೈತರಲ್ಲಿ ಭಯದ ಕಾಡುತ್ತಿದ್ದು, ಮಾಗಿದ ಬೆಳೆ ಕಟಾವಿಗೂ ಹೊಲದ ಕಡೆಗೆ ಹೋಗದಂತಾಗಿದ್ದಾರೆ. ಚಿರತೆ ಕಾಣಿಸಿಕೊಂಡ ಬಗ್ಗೆ ಹಾವೇರಿ ವಲಯ ಅರಣ್ಯ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಇಲಾಖೆಯವರು ಚಿರತೆ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಬೋನು ಕೂಡ ಇಟ್ಟಿದ್ದು ಚಿರತೆ ಮಾತ್ರ ಪತ್ತೆಯಾಗಿಲ್ಲ. ಆದರೆ, ಅರಣ್ಯ ಇಲಾಖೆಯವರು ಚಿರತೆ ಪತ್ತೆಗೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೋನು ಇಟ್ಟು ಮೇಲೆ ಅರಣ್ಯ ಇಲಾಖೆಯವರು ತಿರುಗಿ ಆ ಜಾಗಕ್ಕೆ ಬಂದು ಪರಿಶೀಲನೆಯೂ ಮಾಡುತ್ತಿಲ್ಲ. ಮನುಷ್ಯರು ಮತ್ತು ದನಕರುಗಳ ಮೇಲೆ ದಾಳಿ ಮಾಡಿ ಜೀವ ಹಾನಿಯಾದರೆ ಅರಣ್ಯ ಇಲಾಖೆಯವರೇ ನೇರ ಹೊಣೆಯಾಗುತ್ತಾರೆ. ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿ ನೇಮಿಸಿ ಚಿರತೆ ಪತ್ತೆ ಮಾಡಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆಯ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಪಕ್ಕೀರಗೌಡ ಗಾಜೀಗೌಡ್ರ ಎಚ್ಚರಿಕೆ ನೀಡಿದ್ದಾರೆ.








