ಬೆಂಗಳೂರು:
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗಿನ ಕದನ ವಿರಾಮಕ್ಕೆ ನೀಡಿದ ನಂತರ ಸಿಎಂ ಜೊತೆಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನನ್ನ ಇತಿಮಿತಿ ತಿಳಿದಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ಮತ್ತು ಮುಖ್ಯಮಂತ್ರಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷದ ಅಧ್ಯಕ್ಷನಾಗಿ, ನನ್ನ ಇತಿಮಿತಿ ಗೊತ್ತಿದೆ. ಸಿಎಂ ಜೊತೆಗಿನ ಭಿನ್ನಾಭಿಪ್ರಾಯ ಕುರಿತು ಎಲ್ಲಿಯೂ, ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಅಥವಾ ಭಿನ್ನಾಭಿಪ್ರಾಯ ವ್ಯಕ್ತಪಡಿಸಿಲ್ಲ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಕರ್ನಾಟಕದ ಜನರ ಬಹಳಷ್ಟು ಆಕಾಂಕ್ಷೆಗಳಿವೆ. ಅವರಿಗಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ. ನಮ್ಮ ಗುರಿ 2028 ಮತ್ತು 2029. ಸಿಎಂ ಮತ್ತು ನಾನು ಕಾರ್ಯತಂತ್ರ ರೂಪಿಸುತ್ತೇವೆ ಎಂದು ಹೇಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ದೂರವಾಣಿ ಮೂಲಕ ಕರೆ ಮಾಡಿ ಸಿದ್ದರಾಮಯ್ಯ ಅವರೊಂದಿಗೆ ಉಪಾಹಾರ ಸಭೆ ನಡೆಸುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ. ಸಭೆಯಲ್ಲಿ ಏನಾಯಿತು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ ಶಿವಕುಮಾರ್ , ನಾನು ಎಲ್ಲರೊಂದಿಗೆ ಚರ್ಚಿಸಿದ್ದೇನೆ. ಸಭೆಯಲ್ಲಿ ಏನಾಯಿತು ಎಂಬುದರ ಕುರಿತು ನಾನು ಚರ್ಚಿಸುವುದಿಲ್ಲ” ಎಂದು ಅವರು ಹೇಳಿದರು.
ನೀವು ಗಮನಿಸಿದಂತೆ ನಾನು ಏಕಾಂಗಿಯಾಗಿ ದೆಹಲಿಗೆ ಹೋಗುತ್ತೇನೆ. 8-10 ಶಾಸಕರನ್ನು ನನ್ನೊಂದಿಗೆ ಕರೆದುಕೊಂಡು ಹೋಗಬಹುದು, ಆದರೆ ನಾನು ಹಾಗೆ ಮಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ಎಲ್ಲರನ್ನೂ ನನ್ನೊಂದಿಗೆ ಕರೆದುಕೊಂಡು ಹೋಗಬೇಕು. ಎಲ್ಲಾ 140 ಶಾಸಕರು ನಮ್ಮ ನಾಯಕರು. ಎಚ್‌ಡಿ ಕುಮಾರಸ್ವಾಮಿ ಸರ್ಕಾರದ ಭಾಗವಾಗಿದ್ದಾಗಲೂ ನಾನು ಪ್ರಾಮಾಣಿಕನಾಗಿದ್ದೆ. ಕುಮಾರಸ್ವಾಮಿ ಅವರ ತಂದೆ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಗೆ ತಮ್ಮ ಮಗನ ಸರ್ಕಾರವನ್ನು ಉಳಿಸಲು ನಾನು ಎಷ್ಟು ಪ್ರಯತ್ನ ಮಾಡಿದ್ದೇನೆಂದು ತಿಳಿದಿದೆ. ನನ್ನ ರಾಜಕೀಯದ ಬ್ರ್ಯಾಂಡ್ ನೇರವಾದದ್ದು, ಯಾರ ಬೆನ್ನಿಗೂ ಚೂರಿ ಹಾಕಲ್ಲ ಎಂದರು.
ಆರ್‌ಡಿಪಿಆರ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ದೆಹಲಿಯಲ್ಲಿ ತಮ್ಮ ತಂದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಒಬ್ಬ ಮಗ ತನ್ನ ತಂದೆಯೊಂದಿಗೆ ಮಾತನಾಡಲು ಅರ್ಜಿ ಸಲ್ಲಿಸಬೇಕೇ? ತಂದೆ ಮತ್ತು ಮಗ ಭೇಟಿಯಾಗುವುದು ರಾಜಕೀಯವಲ್ಲ” ಎಂದು ಟೀಕಿಸಿದರು.








