ಹಾಸನ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಕೋಡಿಮಠಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಒಂದೆರಡು ತಿಂಗಳ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಕೋಡಿಮಠಕ್ಕೆ ಭೇಟಿ ನೀಡಿದ್ದರು. ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠ ಶ್ರೀಗಳು ಭವಿಷ್ಯ ನುಡಿಯುವಲ್ಲಿ ಖ್ಯಾತಿ ಪಡೆದಿದ್ದು ಸಚಿವರು ಇಲ್ಲಿಗೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ. ಪರಮೇಶ್ವರ್ ಅವರು ಶ್ರೀಗಳೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ .
ಸಚಿವರ ಭೇಟಿಯ ಕುರಿತು ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಅಥವಾ ಪೊಲೀಸ್ ಇಲಾಖೆಗೆ ಆಗಲಿ ಯಾವುದೇ ಮಾಹಿತಿ ನೀಡಲಾಗಿರಲಿಲ್ಲ ಎನ್ನುವುದು ವಿಶೇಷವಾಗಿದೆ. ರಾಜಕೀಯ ವಿಪ್ಲವ, ನೈಸರ್ಗಿಕ ವಿಕೋಪ, ಜಾಗತಿಕ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯಲಿದ್ದಾರಾ ಅಥವಾ ಇಲ್ಲವಾ ಎನ್ನುವುದರ ಬಗ್ಗೆಯೂ ಹಲವು ಬಾರಿ ಭವಿಷ್ಯವನ್ನು ನುಡಿದಿದ್ದರು.
ಜಿಲ್ಲೆಗೆ ಆಗಮಿಸುತ್ತಿರುವುದನ್ನು ಸಚಿವರು ಗೌಪ್ಯವಾಗಿ ಇಟ್ಟಿದ್ದರು. ಅವರು ಕೋಡಿಮಠಕ್ಕೆ ಭೇಟಿ ನೀಡುವ ವಿಚಾರ, ಜಿಲ್ಲಾಡಳಿತಕ್ಕಾಗಲಿ, ಪೊಲೀಸರಿಗಾಗಲಿ ಅಥವಾ ಸ್ಥಳೀಯ ಮುಖಂಡರಿಗೆ ತಿಳಿದಿಲ್ಲ. ಹಾಗಾಗಿ, ಪರಮೇಶ್ವರ ಅವರ ಭೇಟಿ, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.








