ನವದೆಹಲಿ:
ಕಳೆದ ಫೆಬ್ರವರಿಯ ಬಳಿಕ ನವೆಂಬರ್ ತಿಂಗಳಾಂತ್ಯಕ್ಕೆ ಭಾರತದ ಒಟ್ಟು ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ನವೆಂಬರ್ ತಿಂಗಳಲ್ಲಿ ಜಿಎಸ್ಟಿ ಆದಾಯ 1.7 ಲಕ್ಷ ಕೋಟಿ ರೂ. ಗಳಾಗಿದೆ. ದರ ಕಡಿತದ ಪರಿಣಾಮವಾಗಿ ನವೆಂಬರ್ನಲ್ಲಿ ನಿವ್ವಳ ಜಿಎಸ್ಟಿ ಸಂಗ್ರಹವು ಶೇ. 1.3 ರಷ್ಟು ಏರಿಕೆ ಕಂಡಿದ್ದು, ಮರುಪಾವತಿಗಳು ಕಡಿಮೆಯಾಗಿವೆ. ವರ್ಷದಿಂದ ವರ್ಷಕ್ಕೆ ಜಿಎಸ್ ಟಿ ಸಂಗ್ರಹವು ಶೇ. 0.7 ರಷ್ಟು ಕುಸಿಯುತ್ತಿರುವುದನ್ನು ಸೋಮವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳು ತೋರಿಸಿವೆ.
ದರವನ್ನು ತರ್ಕಬದ್ಧಗೊಳಿಸಲು ಹೆಚ್ಚಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲಾಗಿದೆ. ನವೆಂಬರ್ ತಿಂಗಳಲ್ಲಿ ಕೇಂದ್ರ ಜಿಎಸ್ಟಿ ಸಂಗ್ರಹವು 34,843 ಕೋಟಿ ರೂ. ಗಳಾಗಿದ್ದು, ಹಿಂದಿನ ವರ್ಷದ ಅವಧಿಯಲ್ಲಿ ಇದು 34,141 ಕೋಟಿ ರೂ. ಗಳಾಗಿತ್ತು. ಇನ್ನು ರಾಜ್ಯ ಜಿಎಸ್ಟಿ 43,047 ಕೋಟಿ ರೂ. ಗಳಿಂದ 42,522 ಕೋಟಿ ರೂ. ಗಳಿಗೆ ಇಳಿದಿದೆ. ಸಮಗ್ರ ಜಿಎಸ್ಟಿ 50,093 ಕೋಟಿ ರೂ. ಗಳಿಂದ 46,934 ಕೋಟಿ ರೂ.ಗಳಿಗೆ ಇಳಿದಿದೆ.
ನಿವ್ವಳ ಜಿಎಸ್ಟಿ ಸಂಗ್ರಹ ನವೆಂಬರ್ ತಿಂಗಳಲ್ಲಿ ಶೇ. 1.3 ರಷ್ಟು ಹೆಚ್ಚಾಗಿದ್ದು, 1.52 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ1.5 ಲಕ್ಷ ಕೋಟಿ ರೂ. ಗಳಾಗಿತ್ತು. ಇನ್ನು ತೆರಿಗೆದಾರರು ಪಡೆದ ಮರುಪಾವತಿಯಲ್ಲಿನ ಕುಸಿತವಾಗಿರುವುದರಿಂದ ಇದು ಹೆಚ್ಚಳವಾಗಿದೆ ಎನ್ನುವುದನ್ನು ಅಂಕಿಅಂಶಗಳು ತೋರಿಸಿವೆ. ಈ ತಿಂಗಳಲ್ಲಿ 18,954 ಕೋಟಿ ರೂ. ಮರುಪಾವತಿಗಳಾಗಿದ್ದು, ಹಿಂದಿನ ವರ್ಷದಲ್ಲಿ ಇದು ಶೇ. 4ರಷ್ಟು ಆಗಿತ್ತು.
ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರವು ತೆರಿಗೆ ಸ್ಲ್ಯಾಬ್ಗಳನ್ನು ನಾಲ್ಕರಿಂದ ಎರಡಕ್ಕೆ ಇಳಿಸಿ ಅತಿದೊಡ್ಡ ಜಿಎಸ್ಟಿ ಸುಧಾರಣೆಯನ್ನು ಜಾರಿಗೆ ತಂದಿತು. ಇದರ ಬಳಿಕ ಶೇ. 12 ಮತ್ತು ಶೇ. 28ರ ತೆರಿಗೆ ಸ್ಲ್ಯಾಬ್ಗಳನ್ನು ತೆಗೆದುಹಾಕಲಾಯಿತು. ಹೆಚ್ಚಿನ ತೆರಿಗೆ ವಿಧಿಸಬಹುದಾದ ವಸ್ತುಗಳನ್ನು ಶೇ. 5 ಮತ್ತು ಶೇ. 18ರ ಸ್ಲ್ಯಾಬ್ಗಳಲ್ಲಿ ತರಲಾಯಿತು. ಇನ್ನು ಆಯ್ದ ಐಷಾರಾಮಿ ಸರಕುಗಳಿಗೆ ಹೆಚ್ಚುವರಿಯಾಗಿ ಶೇ. 40ರ ಸ್ಲ್ಯಾಬ್ ಅನ್ನು ರಚಿಸಲಾಯಿತು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಿಎಸ್ಟಿ 2.0 ಜಾರಿಗೆ ಬಂದ ಬಳಿಕ ತೆರಿಗೆ ಸಂಗ್ರಹ ಪ್ರಮಾಣ ಶೇ. 4.6 ರಷ್ಟು ಹೆಚ್ಚಾಗಿದ್ದು, ಇದು 1.95 ಲಕ್ಷ ಕೋಟಿ ರೂ. ಗಳಿಗೆ ತಲುಪಿದೆ. ಜಿಎಸ್ಟಿ 2.0 ಸಂಪೂರ್ಣ ಪರಿಣಾಮ ನವೆಂಬರ್ ನಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಿರಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ನವೆಂಬರ್ ತಿಂಗಳಲ್ಲಿ ಸೆಸ್ ಸಂಗ್ರಹ 4,006 ಕೋಟಿ ರೂ. ಗಳಿಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 12,950 ಕೋಟಿ ರೂ. ಗಳಾಗಿತ್ತು. ಜಿಎಸ್ಟಿ 2.0 ಅಡಿಯಲ್ಲಿ ಪರಿಹಾರ ಸೆಸ್ ಅನ್ನು ತೆಗೆದುಹಾಕಿದ್ದರಿಂದ ಸೆಸ್ ಸಂಗ್ರಹದಲ್ಲಿ ಭಾರಿ ಇಳಿಕೆಯಾಗಿರುವುದಾಗಿ ಆರ್ಥಿಕ ತಜ್ಞರು ತಿಳಿಸಿದ್ದಾರೆ.








